ಗೆಲವಿಗೆ ಮರಳುತ್ತೇವೆ
ಬೆಂಗಳೂರು: ತವರಿನಲ್ಲಿ ನಡೆಯಲಿರುವ ಐಪಿಎಲ್ 7ನೇ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ನಮ್ಮ ತಂಡ ಗೆಲವಿನ ಹಳಿಗೆ ಮರಳಲಿದೆ ಎಂದು ಯುಎಇಯಲ್ಲಿ ಆಡಿದ ಐದು ಪಂದ್ಯಗಳ ಪೈಕಿ ಕೇವಲ ಎರಡರಲ್ಲಿ ಮಾತ್ರ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಕ್ರಿಸ್ ಗೇಯ್ಲ್ ಬುಧವಾರ ಹೇಳಿದ್ದಾರೆ.
ಈಗ ಬಾಕಿ ಉಳಿದಿರುವ ಒಟ್ಟು 9 ಪಂದ್ಯಗಳಲ್ಲಿ ಆರ್ಸಿಬಿ ತಂಡ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಐದು ಪಂದ್ಯಗಳನ್ನಾಡಲಿದೆ.
'ನಾವು ಈಗ ತವರಿಗೆ ಮರಳಿದ್ದೇವೆ. ಇಲ್ಲಿ ಸಾಧ್ಯವಾದಷ್ಟು ಬೇಗ ಗೆಲವಿನ ಹಳಿಗೆ ಮರಳಲು ಯತ್ನಿಸುತ್ತೇವೆ. ಅಲ್ಲದೆ, ಇನ್ನೂ ಹೆಚ್ಚಿನ ಪಂದ್ಯಗಳು ನಡೆಯಬೇಕಿರುವ ಪಂದ್ಯಾವಳಿಯಲ್ಲಿ ಇಲ್ಲಿನ ಪರಿಸ್ಥಿತಿ ಸಹ ಉತ್ತಮವಾಗಿದೆ' ಎಂದು ಗೇಯ್ಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಪಂದ್ಯಾವಳಿಯ ಮೊದಲೆರಡು ಪಂದ್ಯಗಳಲ್ಲಿ ಜಯ ಕಾಣುವ ಮೂಲಕ ನಾವು ಉತ್ತಮ ಆರಂಭ ಮಾಡಿದ್ದೇವು. ಆದರೆ, ನಂತರದ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವುದು ತಂಡಕ್ಕೆ ಬೇಸರ ಉಂಟುಮಾಡಿದೆ. ಆದರೆ, ಕ್ರಿಕೆಟ್ನಲ್ಲಿ ಸೋಲು ಗೆಲವು ಸಾಮಾನ್ಯ' ಎಂದರು.
'ತಂಡ ಸೋಲು ಕಾಣಲು ಆಟಗಾರರಲ್ಲಿ ತೊಂದರೆ ಇದೆ ಎಂದು ನನಗೆ ಅನಿಸುತ್ತಿಲ್ಲ. ಪ್ರತಿ ದಿನವೂ ಗೆಲ್ಲುವ ಸಾಮರ್ಥ್ಯ ನಮ್ಮ ತಂಡಕ್ಕಿದೆ' ಎಂದು ತಂಡದಲ್ಲಿ ಯಾವುದಾದರೂ ತೊಂದರೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಕ್ರಿಕೆಟ್ ಎಂದ ಮೇಲೆ ಪ್ರತಿಯೊಂದು ಪಂದ್ಯದಲ್ಲಿ ಪ್ರತಿಯೊಂದು ತಂಡದ ಮೇಲೆ ಒತ್ತಡ ಇರುವುದು ಸಾಮಾನ್ಯ. ಗಾಯದಿಂದ ಚೇತರಿಸಿಕೊಂಡ ನಂತರ ನನಗೆ ಸಂಪೂರ್ಣ ಮೈಚಳಿ ಬಿಟ್ಟು ಆಡಲು ಸಾಧ್ಯವಾಗುತ್ತಿಲ್ಲ. ಆದರೆ, ಮುಂದಿನ ಎರಡು ದಿನಗಳಲ್ಲಿ ನಾನು ಸಂಪೂರ್ಣ ಫಿಟ್ ಆಗುತ್ತೇನೆ ಎಂಬ ಭರವಸೆ ಹೊಂದಿದ್ದೇನೆ. ಆ ಕುರಿತು ನಾನು ನನ್ನ ದೈಹಿಕ ತಜ್ಞರೊಂದಿಗೆ ಕಾರ್ಯನಿರತನಾಗಿದ್ದೇನೆ ಎಂದು ಗಾಯದಿಂದ ಚೇರಿಕೆಯಾದ ನಂತರ ಫಿಟ್ನೆಸ್ ಬಗ್ಗೆ ಕೇಳಿದ್ದಕ್ಕೆ ಗೇಯ್ಲ್ ಪ್ರತಿಕ್ರಿಯಿಸಿದರು. ನಿವೃತ್ತಿ ಎಂಬುದು ಅವರ ಅವರ ಆಯ್ಕೆಗೆ ಬಿಟ್ಟಿದ್ದು. ಆದರೆ, ಸಚಿನ್ ತೆಂಡೂಲ್ಕರ್ ಅವರು ಇಂದಿಗೂ ಶ್ರೇಷ್ಠ ಮತ್ತು ಕ್ರಿಕೆಟ್ ಇತಿಹಾಸದಲ್ಲೇ ಮಹಾನ್ ಬ್ಯಾಟ್ಸ್ಮನ್ ಎನಿಸಿದ್ದಾರೆ ಎಂದು ಸಚಿನ್ ನಿವೃತ್ತಿ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದರು.