ಜವಾಬ್ದಾರಿ ನಿಭಾಯಿಸುತ್ತೇನೆ: ರಹಾನೆ
ಅಬುಧಾಬಿ: ರಾಜಸ್ಥಾನ ರಾಯಲ್ಸ್ ತಂಡದ ನಂಬಿಕಸ್ತ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ, ತಾವು ಹೆಚ್ಚಿನ ಪ್ರಮಾಣದಲ್ಲಿ ಜವಾಬ್ದಾರಿಯನ್ನು ನಿರ್ವಹಿಸಲು ಇಚ್ಛಿಸುವುದಾಗಿ ತಿಳಿಸಿದ್ದಾರೆ.
ಮಂಗಳವಾರ ನಡೆದ ರೋಚಕ ಸೂಪರ್ ಓವರ್ ಪಂದ್ಯದಲ್ಲಿ ರಾಜಸ್ಥಆನ ಗೆಲವು ದಾಖಲಿಸಿತಾದರೂ, ಹೆಚ್ಚು ಗಮನ ಸೆಳೆದಿದ್ದು, ಜೇಮ್ಸ್ ಫಾಕ್ನರ್ ಹಾಗೂ ಸ್ಟೀವನ್ ಸ್ಮಿತ್. ಆದರೆ ರಹಾನೆ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 59 ಎಸೆತಗಳಲ್ಲಿ 72 ರನ್ ದಾಖಲಿಸಿದ್ದರು. ಈ ಇನಿಂಗ್ಸ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಟೈ ಆದ ಸೂಪರ್ ಓವರ್ನಲ್ಲಿ ಬೌಂಡರಿ ಆಧಾರದ ಮೇಲೆ ಗೆಲವು ದಾಖಲಿಸಿತು. ರಾಹುಲ್ ದ್ರಾವಿಡ್ ತಂಡದಲ್ಲಿ ಆಡುತ್ತಿಲ್ಲವಾದ್ದರಿಂದ ಆರಂಭದಲ್ಲಿ ಬ್ಯಾಟಿಂಗ್ ಮಾಡುವುದರಿಂದ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈ ರೀತಿಯಾಗಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಇಚ್ಛಿಸುತ್ತೇನೆ. ಅದರಿಂದ ನಾನು ಹೆಚ್ಚಿನ ಪರಿಶ್ರಮ ಹಾಕುವಂತೆ ಮಾಡುತ್ತದೆ. ಅಲ್ಲದೆ ನನ್ನ ಆಟವನ್ನು ಅಭಿವೃದ್ಧಿಪಡಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದು ರಹಾನೆ ತಿಳಿಸಿದರು.