ತಾತಂಡ ಹಾಕಿ: 10 ತಂಡಗಳ ಮುನ್ನಡೆ
ವಿರಾಜಪೇಟೆ: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯುತ್ತಿರುವ ತಾತಂಡ ಕೌಟುಂಬಿಕ ಹಾಕಿ ಕಪ್ನ 11ನೇ ದಿನದ ಬುಧವಾರದ ಪಂದ್ಯಾವಳಿಯಲ್ಲಿ ನಂಬಡಮಾಡ ಮತ್ತು ಕರ್ತಮಾಡ ತಂಡ ಸಹಿತ 10 ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ. 2 ಪಂದ್ಯಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.
1ನೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೆಣೆಸಾಡಿದ ಕಲಿಯಂಡ ಮತ್ತು ಅಜ್ಜಕುಟ್ಟೀರ ತಂಡಗಳು ಪರಸ್ಪರ ತೀವ್ರ ಪೈಪೋಟಿ ನೀಡಿದರೂ ಕಲಿಯಂಡ ತಂಡ 2-1 ಗೋಲು ದಾಖಲಿಸುವ ಮೂಲಕ ಅಜ್ಜಕುಟ್ಟೀರ ತಂಡವನ್ನು ಮಣಿಸಿ ಮುಂದಿನ ಹಂತ ಪ್ರವೇಶಿಸಿತು. ಕಲಿಯಂಡ ಪರವಾಗಿ ಬಿದ್ದಪ್ಪ ಮತ್ತು ಕಾರ್ಯಪ್ಪ ತಲಾ ಒಂದು ಗೋಲು ದಾಖಲಿಸಿ ಜಯದ ಗೆಲವಿಗೆ ಆಸರೆಯಾದರು. ಅಜ್ಜಕುಟ್ಟೀರ ಪರ ಪೂಣಚ್ಚ ಒಂದು ಗೋಲು ಹೊಡೆದರು.
2ನೇ ಪಂದ್ಯದಲ್ಲಿ ಕರ್ತಮಾಡ ತಂಡಕ್ಕೆ ಎದುರಾಳಿಯಾಗಿದ್ದ ಕೊಂಗೆಟ್ಟೀರ ತಂಡ ಕೇವಲ ಒಂದು ಗೋಲು ದಾಖಲಿಸುವ ಮೂಲಕ ಕರ್ತಮಾಡ ತಂಡಕ್ಕೆ ಶರಣಾಯಿತು. 5 ಗೋಲು ಹೊಡೆದ ಕರ್ತಮಾಡ ತಂಡ ವಿಜಯ ಮಾಲೆ ಧರಿಸಿತು. ಕರ್ತಮಾಡ ಪರ ಮೋಹನ್, ಹರೀಶ್ ಪೊನ್ನಪ್ಪ, ಲವ, ರಾಕೇಶ್ ಹಾಗೂ ಲತೀಶ್ ತಲಾ ಒಂದು ಗೋಲು ದಾಖಲಿಸಿದರು. ಕೊಂಗೆಟ್ಟೀರ ಪರವಾಗಿ ಮಾದಪ್ಪ ಒಂದು ಗೋಲು ದಾಖಲಿಸಿದರು.
ಮೂರನೇ ಪಂದ್ಯದಲ್ಲಿ ಕೋನೇರೀರ ತಂಡ ಬಲ್ಯಮಂಡ ತಂಡವನ್ನು ಭರ್ಜರಿ 4-1 ಗೋಲುಗಳಿಂದ ಮಣಿಸಿತು. ಕೋನೇರಿರ ತಂಡ ಪರವಾಗಿ ಜೀವನ್, ಮಂದಣ್ಣ, ಶ್ರೇಯಸ್ ಹಾಗೂ ಸಂಪತ್ ತಲಾ 1 ಗೋಲು ದಾಖಸಿದರು.
ನಾಲ್ಕನೇ ಪಂದ್ಯದಲ್ಲಿ ಬಿದ್ದಾತ್ತಂಡ ತಂಡ ತನ್ನ ಎದುರಾಳಿ ಪಡೆಯಂಡ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಈ ತಂಡಗಳ ನಡುವೆ ತೀವ್ರ ಪೈಪೋಟಿ ಇತ್ತಾದರೂ ಬಿದ್ದಾತ್ತಂಡ ಪರವಾಗಿ ಮೇದಪ್ಪ 2 ಗೋಲು ದಾಖಲಿಸುವ ಮೂಲಕ ತಂಡಕ್ಕೆ ಗೆಲವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಡೆಯಂಡ ಪರ ಸಂತೋಷ್ 1 ಗೋಲು ದಾಖಲಿಸಿದರು.
5ನೇ ಪಂದ್ಯದಲ್ಲಿ ಪೊಟ್ಟಡ ತಂಡವು ಕಾಬ್ಯಮಾಡ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ಪೊಟ್ಟಡ ತಂಡದ ಪರವಾಗಿ ಅಯ್ಯಪ್ಪ 2, ಅಚ್ಚಪ್ಪ 1 ಗೋಲು ದಾಖಲಿಸಿದರು. ಕಾಡ್ಯಮಾಡ ತಂಡದ ಪರವಾಗಿ ರಂಜನ್ 1 ಗೋಲು ದಾಖಲಿಸಿ ತಂಡಕ್ಕೆ ಆಸರೆಯಾದರು.
ಪೊಟ್ಟಡ ತಂಡದ ಉಯನ್ಮೋಖ ಆಟಗಾರ ರಿಕ್ಷಿತ್ ಎಂದಿನಂತೆ ಆಟವಾಡಿ ಎಲ್ಲರ ಗಮನ ಸೆಳೆದ. ಈತ ಭವಿಷ್ಯದಲ್ಲಿ ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗುವ ಎಲ್ಲ ಅರ್ಹತೆ ಹೊಂದಿದ್ದಾನೆಂಬ ಮೆಚ್ಚುಗೆಯ ಮಾತುಗಳು ಪ್ರೇಕ್ಷಕರ ಗ್ಯಾಲರಿಯಿಂದ ಕೇಳಿ ಬರುತ್ತಿತ್ತು.
1ನೇ ಮೈದಾನದ ಕೊನೆ ಪಂದ್ಯದಲ್ಲಿ ಸೆಣೆಸಾಡಿದ ಪೊನ್ನಾಲತಂಡವು ಮಾಲೇಟ್ಟೀರ(ಕೆರೆಮಳ್ಳೂರು) ತಂಡವನ್ನು 3-0 ಗೋಲುಗಳಿಂದ ಭರ್ಜರಿ ಜಯ ದಾಖಲಿಸಿತು. ಪೊನ್ನಾಲತ್ತಂಡ ಪರವಾಗಿ ದೇವಯ್ಯ 2 ಗೋಲು ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುತ್ತಪ್ಪ 1 ಗೋಲು ದಾಖಲಿಸಿದರು.
2ನೇ ಮೈದಾನದಲ್ಲಿ ಮೊದಲ ಪಂದ್ಯವಾಡಿದ ಮಂಡೇಟೀರ ತಂಡವು ಕಟ್ಟೇತರ ತಂಡವನ್ನು 4-0 ಗೋಲುಗಳಿಂದ ಮಣಿಸಿ ಮುಂದಿನ ಹಂತ ಪ್ರವೇಶಿಸಿತು. ಮಂಡೇಟೀರ ಪರವಾಗಿ ವರುಣ್, ಸುನೀಲ್ ಮಂದಪ್ಪ ತಲಾ 1 ಗೋಲು ದಾಖಲಿಸಿದರೆ, ಮೇಹಲ್ ಬೆಳ್ಳಿಯಪ್ಪ 2 ಗೋಲು ದಾಖಲಿಸಿದರು.
2ನೇ ಪಂದ್ಯದ ಮುಕುವಂಡ ವರ್ಸಸ್ ಮಾಸಿಮಂಡ ತಂಡದ ನಡುವೆ ನಡೆಯಿತು. 5-0 ಗೋಲುಗಳಿಂದ ಜಯಗಳಿಸಿದ ಮುಕುವಂಡ ಪರವಾಗಿ ಉಜ್ವಲ್ 2 ಗೋಲು, ನಿಖಿಲ್, ಕಾವೇರಪ್ಪ, ಪೂಣಚ್ಚ 1 ಗೋಲು ದಾಖಲಿಸಿದರು.
ನಂಬಡಮಾಡ ತಂಡವು ಚಪ್ಪುಡಿರ ತಂಡದ ನಡುವೆ ತೀವ್ರ ಸೆಣೆಸಾಟ ನಡೆಯಿತು. ಚಪ್ಪುಡಿರ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ನಂಬಡಮಾಡ ತಂಡ ವಿಜಯದ ನಗೆಬೀರಿತು. ನಂಬಡಮಾಡ ಪರ ದಿಲನ್ ಮತ್ತು ನಿರನ್ ತಲಾ 1 ಗೋಲು, ಚೆಪ್ಪುಡಿರ ಪರವಾಗಿ ಕೀರ್ತನ್ 1 ಗೋಲು ದಾಖಲಿಸಿದರು.
3ನೇ ಪಂದ್ಯದಲ್ಲಿ ಅಮ್ಮಂಡ ಮತ್ತು ಮೇಕೀರಿರ ತಂಡ ನಡುವೆ ನಡೆದು ಅಮ್ಮಂಡ ತಂಡ 1-0 ಗೋಲುಗಳಿಂದ ಜಯ ತನ್ನದಾಗಿಸಿಕೊಂಡಿತು.
2 ಪಂದ್ಯಗಳು ಕಾರಣಾಂತಗಳಿಂದ ಮುಂದೂಡಲ್ಪಟ್ಟಿದ್ದು, ಅಕ್ಟೋಬರ್ 3 ರಂದು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.