ಮತದಾನ ಮಾಡಿದ ಚೇತೇಶ್ವರ ಪೂಜಾರ
ರಾಜ್ಕೋಟ್: ದುಬೈನಲ್ಲಿನ ಐಪಿಎಲ್ ಪಂದ್ಯಗಳನ್ನು ಮುಗಿಸಿಕೊಂಡು ಭಾರತಕ್ಕೆ ಮರಳಿದ ಚೇತೇಶ್ವರ ಪೂಜಾರ ಬುಧವಾರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಏ.28ರಂದು ಆರ್ಸಿಬಿ ವಿರುದ್ಧದ ಪಂದ್ಯದ ನಂತರ ಭಾರತಕ್ಕೆ ವಾಪಸ್ಸಾದ ಚೇತೇಶ್ವರ ಪೂಜಾರ, ಚುನಾವಣೆಯಲ್ಲಿ ತಮ್ಮ ಮತಚಲಾಯಿಸಲು ಮುಂದಾಗಿದ್ದಾರೆ.
ಇನ್ನು ರಾಜ್ಕೋಟ್ ಜಿಲ್ಲಾ ಹಾಗೂ ಗುಜರಾತ್ನ ಚುನಾವಣಾ ಆಯೋಗವು 26 ವರ್ಷದ ಚೇತೇಶ್ವರ ಪೂಜಾರ ಅವರನ್ನು ಲೋಕಸಭೆ ಚುನಾವಣೆಯ ರಾಯಭಾರಿ ಹಾಗೂ ಐಕಾನ್ ಆಗಿ ಆಯ್ಕೆ ಮಾಡಿತ್ತು.
ಪೂಜಾರ ಅವರು ದುಬೈನಿಂದ ವಾಪಸ್ಸಾಗಿ ತಮ್ಮ ಮತವನ್ನು ಚಲಾಯಿಸಿರುವುದು ಇತರರು ಮತದಾನ ಮಾಡಲು ಪ್ರೇರಣೆ ನೀಡುತ್ತದೆ ಎಂದು ರಾಜ್ಕೋಟ್ ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ನಮ್ಮ ಹೊಸ ಸರ್ಕಾರ ರಚನೆಗಾಗಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಹಾಗಾಗಿ ಯುವಕರು ಹಾಗೂ ಹಿರಿಯರು ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟು ಮತದಾನ ಮಾಡುವಂತೆ ವಿನಂತಿ ಮಾಡುತ್ತೇನೆ ಎಂದು ಚೇತೇಶ್ವರ ಪೂಜಾರ ಅವರು ತಿಳಿಸಿದ್ದಾರೆ.