ಆಯ್ಕೆಯೇ ಧೋನಿಗೆ ದೊಡ್ಡ ಚಿಂತೆ
ಕಳೆದ ಪಂದ್ಯದಲ್ಲಿನ ಹೀನಾಯ ಸೋಲು ಹಾಗೂ ಜೇಮ್ಸ್ ಆ್ಯಂಡರ್ಸನ್ ಅವರ ಪ್ರಕರಣದಲ್ಲಿ ನ್ಯಾಯಾಂಗ ...
ಮ್ಯಾಂಚೆಸ್ಟರ್: ಕಳೆದ ಪಂದ್ಯದಲ್ಲಿನ ಹೀನಾಯ ಸೋಲು ಹಾಗೂ ಜೇಮ್ಸ್ ಆ್ಯಂಡರ್ಸನ್ ಅವರ ಪ್ರಕರಣದಲ್ಲಿ ನ್ಯಾಯಾಂಗ ಸಮಿತಿಯ ತೀರ್ಪಿನಿಂದ ಅತೃಪ್ತಿಯ ನಡುವೆಯೇ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ.
ಗಾಯಗೊಂಡಿರುವ ಹುಲಿಗಳಂತಾಗಿರುವ ಭಾರತ ತಂಡದ ಆಟಗಾರರು ಹಿಂದಿನ ನೋವು ಮರೆಯಲು ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಆ ಮೂಲಕ ಮತ್ತೆ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯೊಂದಿಗೆ ತಮ್ಮ ಪ್ರಭುತ್ವ ಹೊಂದುವ ವಿಶ್ವಾಸದಲ್ಲಿ ಮಹೀ ಪಡೆ ಇದೆ.
ನಾಟಿಂಗ್ಹ್ಯಾಮ್ನಲ್ಲಿನ ಮೊದಲ ಪಂದ್ಯದಲ್ಲಿ ಡ್ರಾ ಹಾಗೂ ಎರಡನೇ ಪಂದ್ಯದಲ್ಲಿ ಲಾರ್ಡ್ಸ್ ಅಂಗಣದಲ್ಲಿನ ಐತಿಹಾಸಿಕ ಗೆಲವಿನಿಂದ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಭಾರತ, ಸೌಥಾಂಪ್ಟನ್ನ ಮೂರನೇ ಟೆಸ್ಟ್ ಪಂದ್ಯದಲ್ಲಿ ದಿಢೀರನೇ ನಿಯಂತ್ರಣ ಕಳೆದುಕೊಂಡಿತು. ಅಲ್ಲದೆ ಮೊದಲ ಪಂದ್ಯದಲ್ಲಿ ರವೀಂದ್ರ ಜಡೇಜಾ ಹಾಗೂ ಜೇಮ್ಸ್ ಆ್ಯಂಡರ್ಸನ್ ನಡುವಣ ಪ್ರಕರಣದಲ್ಲಿ ಜಡೇಜಾಗೆ ದಂಡ ವಿಧಿಸಿ, ನಂತರ ಆ್ಯಂಡರ್ಸನ್ ಅವರನ್ನು ಆರೋಪ ಮುಕ್ತರನ್ನಾಗಿಸಿರುವುದು ಭಾರತ ತಂಡಕ್ಕೆ ತೀವ್ರ ಬೇಸರವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಗುರುವಾರ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಆರಂಭವಾಗಲಿರುವ 4ನೇ ಟೆಸ್ಟ್ಗಾಗಿ ಟೀಂ ಇಂಡಿಯಾದ ಅಂತಿಮ ಹನ್ನೊಂದರ ಆಯ್ಕೆ ಧೋನಿಗೆ ತಲೆನೋವಾಗಿ ಪರಿಣಮಿಸಿದೆ. ಗಾಯದಿಂದ ಬಳಲುತ್ತಿರುವ ಲಾರ್ಡ್ಸ್ ಪಂದ್ಯದ ಹೀರೊ ಇಶಾಂತ್ ಶರ್ಮಾ ಈ ಪಂದ್ಯಕ್ಕೂ ಅಲಭ್ಯರಾಗಿರುವುದು ತಂಡಕ್ಕೆ ಹಿನ್ನಡೆಯುಂಟು ಮಾಡಿದೆ.
ತಂಡದಲ್ಲಿನ ಹೊಂದಾಣಿಕೆ, ಬೌಲಿಂಗ್ ಲಯದ ಸಮಸ್ಯೆ, ಸ್ಲಿಪ್ ಸೇರಿದಂತೆ ಕ್ಷೇತ್ರ ರಕ್ಷಣೆಯಲ್ಲಿನ ವೈಫಲ್ಯ, ಬ್ಯಾಟ್ಸ್ಮನ್ಗಳ ಸ್ಥಿರ ಪ್ರದರ್ಶನದ ಕೊರತೆ ಹೀಗೆ ಸಾಕಷ್ಟು ಸಮಸ್ಯೆಯನ್ನು ಭಾರತ ತಂಡ ಎದುರಿಸುತ್ತಿದೆ. ಇತ್ತ ಇಂಗ್ಲೆಂಡ್ ಕಳೆದ ಪಂದ್ಯದಲ್ಲಿನ ಗೆಲವು, ನಾಯಕ ಅಲಸ್ಟೇರ್ ಕುಕ್ ಫಾರ್ಮ್ಗೆ ಮರಳಿರುವುದು, ಜೇಮ್ಸ್ ಆ್ಯಂಡರ್ಸನ್ ಆರೋಪ ಮುಕ್ತರಾಗಿ ಹೊರಬಂದಿರುವುದರಿಂದ ಸಾಕಷ್ಟು ನಿರಾಳವಾಗಿದೆಯಲ್ಲದೇ, ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ.
ತಂಡದಲ್ಲಿ ಬದಲಾವಣೆ ಗಾಳಿ: ಕಳೆದ ಪಂದ್ಯದಲ್ಲಿನ ಹೀನಾಯ ಸೋಲಿನ ನಂತರ ಭಾರತ ತಂಡದಲ್ಲಿ ಕೆಲ ಬದಲಾವಣೆಗಳಾದರೆ ಅಚ್ಚರಿ ಪಡುವಂತಿಲ್ಲ. ಸತತ ಆರು ಪಂದ್ಯಗಳಿಂದ ವೈಫಲ್ಯ ಅನುಭವಿಸುತ್ತಿರುವ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಸ್ಥಾನಕ್ಕೆ ಸಂಚಕಾರ ಬಂದಿದೆ. ಅವರ ಸ್ಥಾನಕ್ಕೆ ಅನುಭವಿ ಗೌತಮ್ ಗಂಭೀರ್ ಅವರು ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಭಾರತ ತಂಡದ ಅಭ್ಯಾಸದ ವೇಳೆ ಗಂಭೀರ್ ಹೆಚ್ಚು ಹೊತ್ತು ನೆಟ್ಸ್ನಲ್ಲಿ ಬೆವರು ಹರಿಸಿದ್ದಾರೆ.
ಇನ್ನು ಇಶಾಂತ್ ಶರ್ಮಾ ಬದಲಿಯಾಗಿ ಕಳೆದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಪಂಕಜ್ ಸಿಂಗ್ ತಂಡದಲ್ಲಿ ಮುಂದುವರಿಯುವರೇ, ಅಥವಾ ಅವರ ಸ್ಥಾನಕ್ಕೆ ವೇಗಿ ವರುಣ್ ಅರುಣ್ ಅವರನ್ನು ಕಣಕ್ಕಿಳಿಸುವರೇ ಎಂಬ ಗೊಂದಲ ಹುಟ್ಟುಕೊಂಡಿದೆ. ಇನ್ನು ಭಾರತ ಅಭ್ಯಾಸದ ವೇಳೆ ಆರ್. ಅಶ್ವಿನ್ ಅವರ ತಾಲೀಮು ಸಹ ಅನೇಕರ ಅಚ್ಚರಿಗೆ ಕಾರಣವಾಗಿದ್ದು, ಅಂತಿಮ ಹನ್ನೊಂದರಲ್ಲಿ ಕಾಣಿಸಿಕೊಳ್ಳುವರೇ ಎಂಬ ಕುತೂಹಲ ಹೆಚ್ಚಿದೆ.
ಐದು ಬೌಲರ್ಗಳ ಅಗತ್ಯತೆ: ಭಾರತ ತಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಐದು ಬೌಲರ್ಗಳ ಅಗತ್ಯತೆಯಲ್ಲಿದೆ. ಇಶಾಂತ್ ಶರ್ಮಾ ತಂಡದಿಂದ ಹೊರಗುಳಿದ ನಂತರ ಸ್ವಿಂಗ್ ಬೌಲರ್ ಭುವನೇಶ್ವರ್ ಮೇಲೆ ಒತ್ತಡ ಹೆಚ್ಚಾಗಿದೆ. ಆದರೆ, ಕಳೆದ ಪಂದ್ಯದ ವೇಳೆ ನೋವಿಗೊಳಗಾಗಿದ್ದ ಭುವನೇಶ್ವರ ನಾಲ್ಕನೇ ಟೆಸ್ಟ್ನಲ್ಲಿ ಆಡುವುದು ಇನ್ನೂ ಸಂಶೆಯಾಗಿಯೇ ಉಳಿದಿದೆ. ಟಾಸ್ಗೆ ಮುನ್ನವೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಇನ್ನು ಭುವನೇಶ್ವರ್ಗೆ ಮತ್ತೊಂದು ತುದಿಯಂದ ಮೊಹಮದ್ ಶಮಿ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡುತ್ತಿಲ್ಲ. ಅಲ್ಲದೆ ಪಂಕಜ್ ಸಿಂಗ್ ಸಹ ಪರಿಣಾಮಕಾರಿ ದಾಳಿ ನಡೆಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ನಾಯಕ ಧೋನಿ ಹಾಗೂ ಕೋಚ್ ಡಂಕನ್ ಫ್ಲೆಚರ್ ಬೌಲಿಂಗ್ ವಿಭಾಗವನ್ನು ಆಯ್ಕೆ ಮಾಡಲು ಹೆಚ್ಚಿನ ತಲೆ ಕೆಡಿಸಿಕೊಳ್ಳಬೇಕಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಭಾರತ ಬೌಲಿಂಗ್ ವಿಭಾಗದಲ್ಲಿ ಫೋರ್ ಪ್ಲಸ್ ಒನ್ ತಂತ್ರ ಅಳವಡಿಸಿಕೊಂಡಿದ್ದಕ್ಕೆ ಬೆಲೆತೆತ್ತಿತು. ಹಾಗಾಗಿ ಈ ಪಂದ್ಯದಲ್ಲಿ ಐದು ಪ್ರಮುಖ ಬೌಲರ್ಗಳು ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಒತ್ತಡದಲ್ಲಿ ಬ್ಯಾಟಿಂಗ್ ವಿಭಾಗ: ಪ್ರಸಕ್ತ ಸರಣಿಯಲ್ಲಿ ಭಾರತ ತಂಡದ ಪರ ಮುರಳಿ ವಿಜಯ್ ಹಾಗೂ ಅಜಿಂಕ್ಯ ರಹಾನೆ ಹೊರತು ಪಡಿಸಿ ಉಳಿದ ಯಾವುದೇ ಪ್ರಮುಖ ಬ್ಯಾಟ್ಸ್ಮನ್ಗಳು ಉತ್ತಮ ಸರಾಸರಿಯಲ್ಲಿ ರನ್ ಗಳಿಸಿಲ್ಲ. ಬಹಳಷ್ಟು ನಿರೀಕ್ಷೆ ಹೊಂದಲಾಗಿದ್ದ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ರನ್ಗಳಿಸದಿರುವುದು ತಂಡದ ಪ್ರಮುಖ ಸಮಸ್ಯೆಯಾಗಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಪ್ರತಿ ಬ್ಯಾಟ್ಸ್ಮನ್ಗಳು ಉತ್ತಮ ಆರಂಭದ ಹೊರತಾಗಿಯೂ ವಿಕೆಟ್ ಕೈಚೆಲ್ಲಿದ್ದು ತೀವ್ರ ನಿರಾಸೆ ಮೂಡಿಸಿತ್ತು. ಹಾಗಾಗಿ ಈ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಮಟ್ಟದಲ್ಲಿ ತಂಡಕ್ಕೆ ನೆರವಾಗಬೇಕಿದೆ.
ಓಲ್ಡ್ ಟ್ರಾಫರ್ಡ್ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ
ತಂಡ ಪಂದ್ಯ ಜಯ ಸೋಲು ಡ್ರಾ
ಇಂಗ್ಲೆಂಡ್ 8 3 0 5
ಭಾರತ 8 0 3 5
ವರ್ಷ ಫಲಿತಾಂಶ,
1936 ಡ್ರಾ
1946 ಡ್ರಾ
1952 ಇಂಗ್ಲೆಂಡ್ಗೆ ಇನಿಂಗ್ಸ್ ಮತ್ತು 207 ರನ್ ಜಯ
1959 ಇಂಗ್ಲೆಂಡ್ಗೆ 171 ರನ್ ಜಯ
1971 ಡ್ರಾ
1974 ಇಂಗ್ಲೆಂಡ್ಗೆ 113 ರನ್ ಜಯ
1982 ಡ್ರಾ
1990 ಡ್ರಾ
ತಂಡಗಳು
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಮುರಳಿ ವಿಜಯ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಸ್ಟುವರ್ಟ್ ಬಿನ್ನಿ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮದ್ ಶಮಿ, ಭುವನೇಶ್ವರ್ ಕುಮಾರ್, ಈಶ್ವರ್ ಪಾಂಡೆ, ಪಂಕಜ್ ಸಿಂಗ್, ವರುಣ್ ಅರುಣ್, ನಮನ್ ಓಜಾ.ಇಂಗ್ಲೆಂಡ್: ಅಲಸ್ಟೇರ್ ಕುಕ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಗ್ಯಾರಿ ಬ್ಯಾಲೆನ್ಸ್, ಇಯಾನ್ ಬೆಲ್, ಸ್ಟುವರ್ಟ್ ಬ್ರಾಡ್, ಕ್ರಿಸ್ ಜೋರ್ಡನ್, ಜೋಸ್ ಬಟ್ಲರ್, ಸ್ಯಾಮ್ ರಾಬ್ಸನ್, ಜೋ ರೂಟ್, ಬೆನ್ ಸ್ಟೋಕ್ಸ್, ಕ್ರಿಸ್ ವೊಕ್ಸ್, ಸ್ಟೀವನ್ ಫಿನ್. ಪಂದ್ಯ ಆರಂಭ: ಮಧ್ಯಾಹ್ನ 3.30 ಗಂಟೆ (ಭಾರತೀಯ ಕಾಲಮಾನ)