ಟೆನಿಸ್: ಸೆರೆನಾ, ಶರಪೋವಾ ಮುನ್ನಡೆ
ಮಾಂಟ್ರಿಯಲ್ ಡಬ್ಲ್ಯುಟಿಎ ಟೆನಿಸ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್...
ಮಾಂಟ್ರಿಯಲ್: ಮಾಂಟ್ರಿಯಲ್ ಡಬ್ಲ್ಯುಟಿಎ ಟೆನಿಸ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್, ಮರಿಯಾ ಶರಪೋವಾ ಮುನ್ನಡೆ ಸಾಧಿಸಿದ್ದಾರೆ.
ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯದ ಸಮಂತಾ ಸ್ಟೋಸರ್ ಅವರನ್ನು 6-0, 6-2 ಅಂತರದಿಂದ ಹಿಮ್ಮೆಟ್ಟಿಸಿದರು. ದ್ವಿತೀಯ ಸೆಟ್ ವೇಳೆ ಅಂಕ 1-1 ಸಮಬಲದಲ್ಲಿದ್ದಾಗ ಮಳೆ ಸುರಿಯಿತು. ಬಳಿಕ ತನ್ನ ಎಂದಿನ ಪರಾಕ್ರಮ ಮುಂದುವರಿಸಿದ ಸೆರೆನಾ, ಕಾಂಗರೂ ಆಟಗಾರ್ತಿಯನ್ನು ಸುಲಭದಲ್ಲಿ ಮಣಿಸಿದರು. ಇವರ ಹೋರಾಟ ಒಟ್ಟು 58 ನಿಮಿಷಗಳಲ್ಲಿ ಮುಗಿಯಿತು.
2011ರ ಯುಎಸ್ ಓಪನ್ನಲ್ಲಿ ಸೆರೆನಾಗೆ ಆಘಾತವಿಕ್ಕಿದ್ದ ಸಮಂತಾ, ಅನಂತರ ವಿಶ್ವದ ಈ ಅಗ್ರಮಾನ್ಯ ಆಟಗಾರ್ತಿಯ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳಲ್ಲೂ ಸೋಲುಂಡಂತಾಯಿತು. ಸಮಂತಾ ವಿರುದ್ಧ ಸೆರೆನಾ ಗೆಲುವಿನ ದಾಖಲೆ 7-3ಕ್ಕೆ ವಿಸ್ತರಿಸಲ್ಪಟ್ಟಿದೆ.
ಫ್ರೆಂಚ್ ಓಪನ್ ಚಾಂಪಿಯನ್ ಮರಿಯಾ ಶರಪೋವಾ 3 ಸೆಟ್ಗಳ ಕಾದಾಟದ ಬಳಿಕ ಸ್ಪೇನಿನ ಉದಯೋನ್ಮುಖ ಆಟಗಾರ್ತಿ ಗಾರ್ಬಿನೆ ಮುಗುರುಝ ಅವರನ್ನು ಸೋಲಿಸಿದರು. ಶರಪೋವಾ ಗೆಲುವಿನ ಅಂತರ 4-6, 6-3, 6-1. ರಶ್ಯನ್ ತಾರೆಯೀಗ ಮತ್ತೋರ್ವ ಸ್ಪ್ಯಾನಿಷ್ ಆಟಗಾರ್ತಿ ಕಾರ್ಲಾ ಸೂರೆಜ್ ನವಾರೊ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ನವಾರೊ ಜೆಕ್ನ ಕ್ಯಾರೋಲಿನಾ ಪ್ಲಿಸ್ಕೋವಾ ಅವರಿಗೆ 6-1, 3-6, 6-3 ಸೆಟ್ಗಳ ಸೋಲುಣಿಸಿದರು.