ಸೋಂಗಾ, ಆಗ್ನೇಸ್ಕಾಗೆ ಪ್ರಶಸ್ತಿ
ಅತಿ ಹೆಚ್ಚು ಗ್ರಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ವಿಶ್ವದ ಖ್ಯಾತ ಟೆನಿಸ್ ತಾರೆ ರೋಜರ್ ಫೆಡರರ್ ಅವರನ್ನು ಸೋಲಿಸುವಲ್ಲಿ...
ಟೊರಾಂಟೊ: ಅತಿ ಹೆಚ್ಚು ಗ್ರಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ವಿಶ್ವದ ಖ್ಯಾತ ಟೆನಿಸ್ ತಾರೆ ರೋಜರ್ ಫೆಡರರ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದ ಫ್ರಾನ್ಸ್‌ನ ಜೋ ವಿಲ್‌ಫ್ರೆಡ್ ಸೋಂಗಾ ಅವರು, ರೋಜರ್ಸ್ ಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ತೀವ್ರ ಹಣಾಹಣಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಸೋಂಗಾ ಅವರು ರೋಜರ್ ಫೆಡರರ್ ವಿರುದ್ದ 7-5, 7-6 (3) ಸೆಟ್‌ಗಳಿಂದ ವಿಜಯ ಕಂಡುಕೊಂಡರು.
ಇದು ಸೋಂಗಾ ಅವರಿಗೆ ಋತುವಿನ ಮೊದಲ ಮತ್ತು ಒಟ್ಟಾರೆ 11 ನೇ ಎಟಿಪಿ ಟೂರ್ ಪ್ರಶಸ್ತಿಯಾಗಿದೆ. ಫೈನಲ್ ಹಾದಿಯಲ್ಲಿ ಅವರು ವಿಶ್ವದ ಪ್ರಮುಖ ಆಟಗಾರರಾದ ನೋವಾಕ್ ಜೋಕೊವಿಚ್, ಆ್ಯಂಡಿ ಮರ್ರೆ ಹಾಗೂ ಗ್ರಿಗೋರ್ ದಿಮಿತ್ರೋವ್ ಅವರನ್ನು ಪರಾಭವಗೊಳಿಸಿದ್ದರು.
ಸ್ವೀಜರ್ಲೆಂಡಿನ ಸ್ಟಾರ್ ಫೆಡರರ್, ಪಂದ್ಯದಲ್ಲಿ ಹೆಚ್ಚಿನ ತಪ್ಪುಗಳನ್ನು ಎಸಗಿದ್ದಲ್ಲದೆ, ಸೋಂಗಾ ಅವರ ಬಲಿಷ್ಠ ಸರ್ವ್ ಮತ್ತು ಗ್ರೌಂಡ್ ಸ್ಟ್ರೋಕ್‌ಗಳನ್ನು ಎದುರಿಸಲು ವೈಫಲ್ಯ ಕಂಡರು.
ಮೊದಲ ಸೆಟ್‌ನಲ್ಲಿ ಇಬ್ಬರೂ ಆಟಗಾರರು ಕೆಲ ಅನಗತ್ಯ ತಪ್ಪುಗಳನ್ನು ಎಸಗಿದರು. ಸೋಂಗಾ ಸಹ ತಮ್ಮ ಮೊದಲ ಸರ್ವ್‌ನಲ್ಲೇ ಪರದಾಡಿದರು.
ನಂತರ ಪಂದ್ಯದಲ್ಲಿ ತಮಗಿಂದ ಅಗ್ರ ಆಟಗಾರನ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.ಪುರುಷರು ಡಬಲ್ಸ್ ಫೈನಲ್ ಪಂದ್ಯದಲ್ಲಿ ಬ್ರುನೋ ಸೋರೆಸ್ ಮತ್ತು ಅಲೆಗ್ಸಾಂಡರ್ ಪೇಯಾ ಜೋಡಿ ಇವಾನ್ ಡೂಯಿಂಗ್ ಮತ್ತು ಮಾರ್ಸೆಲೋ ಮೆಲೂಫ್ ಜೋಡಿಯನ್ನು 6-4, 6-3 ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಆಗ್ನೇಸ್ಕಾಗೆ ಮೊದಲ ಪ್ರಶಸ್ತಿ: ಪೊಲೆಂಡ್‌ನ ಆಗ್ನೇಸ್ಕಾ ರಾಡವಾಂಸ್ಕಾ ರೋಜರ್ಸ್ ಕಪ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ ಅವರನ್ನು 6-4, 6-2 ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿಗೆ ಭಾಜನರಾದರು. ಪ್ರಶಸ್ತಿಯೊಂದಿಗೆ ರಾಡವಾಂಸ್ಕಾ 441.000 ಅಮೆರಿಕನ್ ಡಾಲರ್ ಬಹುಮಾನ ಗೆದ್ದರೆ, 34 ವರ್ಷದ ವೀನಸ್ ವಿಲಿಯಮ್ಸ್ ಅವರು, 220,000 ಅಮೆರಿಕನ್ ಡಾಲರ್ ಬಹುಮಾನ ಮುಡಿಗೇರಿಸಿಕೊಂಡರು.
ವಿಶ್ವದ 26ನೇ ರ್ಯಾಂಕಿಂಗ್ ಆಟಗಾರ್ತಿ ವೀನಸ್ ವಿಲಿಯಮ್ಸ್ ವಿರುದ್ದ ಜಯ ಕಂಡುಕೊಂಡ ವಿಶ್ವದ 5ನೇ ರ್ಯಾಂಕಿಂಗ್ ಆಟಗಾರ್ತಿ ರಾಡವಾಂಸ್ಕಾಗೆ ಇದು ಮೊದಲ ರೋಜರ್ ಕಪ್ ಪ್ರಶಸ್ತಿಯಾಗಿದೆ. ಈ ಹಿಂದೆ ಅವರು ಎರಡು ಬಾರಿ ಸೆಮಿಫೈನಲ್ ಪ್ರವೇಶಿಸಿದ್ದರು. 2013 ರ ನಂತರ ರಾಡವಾಂಸ್ಕಾಗೆ ಇದು ಮೊದಲ ಪ್ರಶಸ್ತಿಯಾಗಿದೆ.
ಸಾನಿಯಾ-ಕಾರಾ ರನ್ನರ್ ಅಪ್
ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೋಡಿ ರೋಜರ್ಸ್ ಕಪ್ ಟೆನಿಸ್ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದೆ.
ನಾಲ್ಕನೇ ಶ್ರೇಯಾಂಕ ಪಡೆದಿದ್ದ ಸಾನಿಯಾ ಮತ್ತು ಕಾರಾ ಜೋಡಿ, ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಇಟಲಿಯ ಸರಾ ಎರ್ರಾನಿ ಮತ್ತು ರಾಬರ್ಟಾ ವಿನ್ಸಿ ಜೋಡಿ ವಿರುದ್ದ 7-6, 6-3 ನೇರ ಸೆಟ್‌ಗಳಿಂದ ಸೋಲನನುಭವಿಸಿತು. ಸರಾ ಎರ್ರಾನಿ ಮತ್ತು ರಾಬರ್ಟಾ ವಿನ್ಸಿ ಜೋಡಿ ಇದೇ ಮೊದಲ ಬಾರಿಗೆ ರೋಜರ್ಸ್ ಕಪ್ ಪ್ರಶಸ್ತಿ ಗೆದ್ದುಕೊಂಡಿದೆ.
ಎರಡೂ ಜೋಡಿಗಳು ಕೆಚ್ಚೆದೆಯ ಪ್ರದರ್ಶನ ನೀಡಿದ್ದು ಮೊದಲ ಸೆಟ್ ಟೈ ಬ್ರೇಕರ್‌ಗೆ ಜಾರುವಂತಾಯಿತು. ಆದರೆ, ದ್ವಿತೀಯ ಸೆಟ್‌ನಲ್ಲಿ ಎರ್ರಾನಿ ಮತ್ತು ವಿನ್ಸಿ ಜೋಡಿ ಸುಲಭವಾಗಿ ಮೇಲುಗೈ ಸಾಧಿಸಿತು.