ಭಾರತ ರತ್ನಕ್ಕೆ ಧ್ಯಾನ್‌ಚಂದ್ ಹೆಸರು ಶಿಫಾರಸು
ನವದೆಹಲಿ: ಕೊನೆಗೂ ಭಾರತೀಯ ಹಾಕಿ ದಂತಕತೆ ಧ್ಯಾನ್‌ಚಂದ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ಸಿಗುವ ಲಕ್ಷಣಗಳು ಈಗ ಗೋಚರಿಸುತ್ತಿವೆ.
ಮೇಜರ್ ಧ್ಯಾನ್‌ಚಂದ್ ಅವರ ಹೆಸರನ್ನು ಭಾರತ ರತ್ನ ಪ್ರಶಸ್ತಿಗಾಗಿ ಪ್ರಧಾನಮಂತ್ರಿ ಕಚೇರಿಗೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜೆಜು ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಬಹು ವರ್ಷಗಳಿಂದ ಭಾರತೀಯ ಕ್ರೀಡಾ ಅಭಿಮಾನಿಗಳ ಮನದಲ್ಲಿದ್ದ ಆಸೆ ಈಡೇರುವಂತಾಗಿದೆ.
ಕಳೆದ ವರ್ಷವೂ ಸಹ ಭಾರತ ರತ್ನ ಪ್ರಶಸ್ತಿ ಪಡೆಯುವ ಪ್ರಮುಖರಲ್ಲಿ ಒಬ್ಬರಾಗಿ ಧ್ಯಾನ್‌ಚಂದ್ ಹೆಸರು ಕೇಳಿ ಬಂದಿತ್ತು. ಆದರೆ ಇವರ ಬದಲಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಧ್ಯಾನ್‌ಚಂದ್ ಅವರನ್ನು ಕಡೆಗಣಿಸಲಾಗಿದೆ ಎಂಬ ಟೀಗೆಗಳು ವ್ಯಾಪಕವಾಗಿ ವ್ಯಕ್ತವಾಗಿದ್ದವು.
ಧ್ಯಾನ್‌ಚಂದ್ ಅವರು ಭಾರತಕ್ಕೆ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೂರು ಬಾರಿ ಚಿನ್ನದ ಪದಕ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇವರ ಉಪಸ್ಥಿತಿಯಲ್ಲಿ ಭಾರತ 1928,1932 ಹಾಗೂ 1936ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.
ಈ ಗೌರವಕ್ಕಾಗಿ ಧ್ಯಾನ್‌ಚಂದ್ ಅವರ ಹೆಸರನ್ನು ಕಳೆದ ವರ್ಷ ಜುಲೈನಲ್ಲಿ ಕೇಂದ್ರ ಕ್ರೀಡಾ ಇಲಾಖೆ ಶಿಫಾರಸು ಮಾಡಿತ್ತು. ಆದರೆ ನವೆಂಬರ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಮಂತ್ರಿಯವರು ಸಚಿನ್ ಅವರ ಹೆಸರನ್ನು ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಧ್ಯಾನ್‌ಚಂದ್ ಅವರು ಈ ಗೌರವವನ್ನು ಪಡೆಯುವಲ್ಲಿ ವಿಫಲರಾಗಿದ್ದರು.