ಅಭ್ಯಾಸಕ್ಕಿಳಿದ ಇಶಾಂತ್
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಕಳೆದೆರಡು ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿದ್ದು...
ದ ಒವಲ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಕಳೆದೆರಡು ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಸರಣಿ ಸೋಲಿನ ಭೀತಿಯನ್ನು ಎದುರಿಸುತ್ತಿದೆ. ಹಾಗಾಗಿ ಸರಣಿ ಸೋಲಿನಿಂದ ಪಾರಾಗುತ್ತ ಚಿಂತನೆ ನಡೆಸಿರುವ ಭಾರತ, ಅಂತಿಮ ಹಾಗೂ ಕಡೇಯ ಟೆಸ್ಟ್ ಪಂದ್ಯಕ್ಕೆ ತಾಲೀಮು ಆರಂಬಿಸಿದೆ. ಇನ್ನು ಲಾರ್ಡ್ಸ್ ಪಂದ್ಯದಲ್ಲಿ ಭಾರತದ ಪಾಲಿಗೆ ಹೀರೋ ಆಗಿದ್ದ ವೇಗದ ಬೌಲರ್ ಇಶಾಂತ್ ಶರ್ಮಾ ಬುಧವಾರ ಅಭ್ಯಾಸ ನಡೆಸಿದ್ದು, ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ಸೂಚನೆ ಸಿಕ್ಕಿದೆ.
ತಂಡದ ಅಭ್ಯಾಸ ವೇಳೆ ನಾಯಕ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲೇ ಆಟಗಾರರು ತಾಲೀಮು ನಡೆಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಇಶಾಂತ್ ಶರ್ಮಾ ಸುದೀರ್ಘ ಕಾಲದವರೆಗೂ ನೆಟ್ಸ್‌ನಲ್ಲಿ ಬೆವರಿಳಿಸಿದ್ದು. ಈ ಮೂಲಕ ಭಾರತದ ಬೌಲಿಂಗ್ ವಿಭಾಗಕ್ಕೆ ಮತ್ತೆ ಬಲ ಬಂದಂತಾಗಿದೆ. ಈಗಾಗಲೇ 2-1 ಅಂತರದ ಸರಣಿ ಹಿನ್ನೆಡೆಯಲ್ಲಿರುವ ಭಾರತ, ಮುಂದಿನ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಧೋನಿ ವಿಶ್ರಾಂತಿ ಬಯಸಿರುವ ಹಿನ್ನೆಲೆಯಲ್ಲಿ ಅವರು ಅಭ್ಯಾಸಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ ಎಂದು ಧೋನಿ ಅನುಪಸ್ಥಿತಿ ಬಗ್ಗೆ ತಂಡದಿಂದ ಅಧಿಕೃತವಾಗಿ ಮಾಹಿತಿ ಬಂದಿದೆ. ಆದರೆ ಧೋನಿ ಗುರುವಾರದ ಅಭ್ಯಾಸಕ್ಕೆ ಆಗಮಿಸುವ ನಿರೀಕ್ಷೆಗಳಿವೆ.