ಭಾರತಕ್ಕೆ ಬಂಗಾರ, ಬೆಳ್ಳಿ ಗರಿ
ಗ್ಲಾಸ್ಗೋ: ದೇಶ ಸ್ವಾಂತ್ರ್ಯೋತ್ಸವ ಆಚರೆಯ ಈ ಶುಭ ಸಂದರ್ಭದಲ್ಲಿ ತವರಿನ ಬಿಲಿಯರ್ಡ್ಸ್ ಪಟುಗಳು ಭಾರತಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ತವರಿನ ಖ್ಯಾತಿಯನ್ನು ವಿಶ್ವಮಟ್ಟದಲ್ಲಿ ಮೆರೆಸಿದ್ದಾರೆ.
ಗ್ಲಾಸ್ಗೋದಲ್ಲಿ ನಡೆದ ಆರಂಭಿಕ ವಿಶ್ವ ಬಿಲಿಯರ್ಡ್ಸ್ ತಂಡ ಚಾಂಪಿಯನ್ ಶಿಪ್ನಲ್ಲಿ ಭಾರತದ 'ಬಿ' ತಂಡ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರೆ, ಭಾರತದ 'ಎ' ತಂಡ ಬೆಳ್ಳಿ ಪದಕ ಸಂಪಾದಿಸಿ ತವರಿನ ಕೀರ್ತಿ ಹೆಚ್ಚಿಸಿದ್ದಾರೆ.
ಗುರುವಾರ ತಡರಾತ್ರಿ ಇಲ್ಲಿ ನಡೆದ ಫೈನಲ್ ಸುತ್ತಿನಲ್ಲಿ ಭಾರತಜ ಬಿ ತಂಡದ ಆಟಗಾರರು 5-4 ಅಂಕಗಳ ಅಂತರದಲ್ಲಿ ತಮ್ಮದೇ ದೇಶದ ಮತ್ತೊಂದು ತಂಡ ಎ ವಿರುದ್ಧ ಗೆಲುವು ದಾಖಲಿಸಿ ಬಂಗಾರದ ಹಾರ ಕೊರಳಿಗೆ ಹಾಕಿಕೊಂಡಿತು. ಇತ್ತ ಎರಡನೇ ಸ್ಥಾನದ ಗೌರವ ಪಡೆದ ಭಾರತದ ಎ ತಂಡದ ಆಟಗಾರರು ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿದರು.
ಬೆಂಗಳೂರಿನ ಹುಡುಗ ಪಂಕಜ್ ಆಡ್ವಣಿ ನೇತೃತ್ವದ ಭಾರತ ಬಿ ತಂಡದಲ್ಲಿ ರೂಪೇಶ್ ಶಾ, ದೇವೇಂದ್ರ ಜೋಶಿ ಮತ್ತು ಅಶೋಕ್ ಶಾಂಡಿಲ್ಯ ಅವರು ತವರಿನ ಸವಾಲು ಮುನ್ನಡೆಸಿದ್ದರು. ಮತ್ತೊಂದೆಡೆ ಭಾರತದ ಎ ತಂಡದಲ್ಲಿ ಅಲೋಕ್ ಕುಮಾರ್. ಬಿ. ಭಾಸ್ಕರ್ ಸೌರವ್ ಕೊಠಾರಿ ಮತ್ತು ಧೃವ ಸಿತ್ವಾಲಾ ಹೋರಾಟಕ್ಕೆ ಅಣಿಯಾಗಿದ್ದರು.