ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಹಿ ಪಡೆ ಜಯದ ಕೇಕೆ

Lingaraj Badiger
Updated On : 28 Aug 2014, 11:08 am

ಕಾರ್ಡಿಫ್: ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಸಿಡಿಸಿದ ಭರ್ಜರಿ ಶಕತ ಹಾಗೂ ಬೌಲರ್‌ಗಳ ಕರಾರುವಾಕ್ ದಾಳಿಯ ನೆರೆವಿನಿಂದ ಭಾರತ ತಂಡ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಡಕ್‌ವರ್ತ್ ಲೂಯಿಸ್ ನಿಯಮದಡಿ 133ರನ್‌ಗಳಿಂದ ಜಯಭೇರಿ ಬಾರಿಸಿದೆ. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯೊಂದಿಗೆ ಶುಭಾರಂಭ ಮಾಡಿದೆ.

ಸೋಫಿಯಾ ಗಾರ್ಡನ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 305ರನ್‌ಗಳ ಗುರುತರ ಸವಾಲು ಪಡೆದಿದ್ದ ಇಂಗ್ಲೆಂಡ್ ತನ್ನ ಇನಿಂಗ್ಸ್ ಆರಂಭಿಸಲು ಬರುತ್ತಿದ್ದಂತೆಯೇ ಮಳೆ ಆಟಕ್ಕೆ ಅಡ್ಡಿಪಡಿಸಿತು. ಒಂದೆಡೆ ಭಾರತದ ಆಟಗಾರರು ಕ್ಷೇತ್ರರಕ್ಷಣೆಗಾಗಿ ತಮ್ಮ ಸ್ಥಳಗಳಿಗೆ ತೆರಳುತ್ತಿದ್ದರೆ, ಇನ್ನೊಂದೆಡೆ ಆರಂಭಿಕರಾದ ನಾಯಕ ಅಲಸ್ಟೇರ್ ಕುಕ್ ಮತ್ತು ಅಲೆಕ್ಸ್ ಹಾಲ್ಸ್ ಇನಿಂಗ್ಸ್ ಆರಂಭಿಸಲು ಕ್ರೀಸ್‌ನತ್ತ ಪ್ರವೇಶಿಸಿದರು. ಆಗ ಮಳೆ ಸುರಿಯಲಾರಂಭಿಸಿತು. ನಂತರ ಮಳೆ ಬೇಗನೆ ನಿಂತಿತಾದರೂ ಸುಮಾರು 40 ನಿಮಿಷಗಳ ಆಟಕ್ಕೆ ಅಡ್ಡಿಯಾಗಿದ್ದರಿಂದ ಡಕ್‌ವರ್ತ್ ಲೂಯಿಸ್ ನಿಯಮದಡಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 47 ಓವರುಗಳಲ್ಲಿ 295ರನ್‌ಗಳ ಗುರಿ ನೀಡಲಾಯಿತು.

ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಆರಂಭದಿಂದಲೇ ಒತ್ತಡಕ್ಕೆ ಸಿಲುಕಿದ್ದರಿಂದ ಅಂತಿಮವಾಗಿ 38.1 ಓವರುಗಳಲ್ಲಿ 161 ರನ್‌ಗಳಿಸಲಷ್ಟೇ ಶಕ್ತರಾದರು. ಹಾಲ್ಸ್ 63 ಎಸೆತಗಳಲ್ಲಿ 5 ಬೌಂಡರಿಗಳಿದ್ದ 40ರನ್‌ಗಳಿಸಿದ್ದೇ ಆತಿಥೇಯರ ಪರ ಉತ್ತಮ ಸಾಧನೆ ಎನಿಸಿತು.

ರೈನಾ ಶತಕ, ಧೋನಿ ಆಸರೆ: ಇದಕ್ಕೆ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ 50 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 304ರನ್‌ಗಳಿಸಿತು. ಐದನೇ ಕ್ರಮಾಂಕದಲ್ಲಿ ಆಡಲಿಳಿದ ಸುರೇಶ್ ರೈನಾ ಕೇವಲ 75 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ ಬರೋಬ್ಬರಿ 100ರನ್ ಬಾರಿಸಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಅರ್ಧಶತಕ ಸಿಡಿಸಿದರು. ಧೋನಿ 51 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 52 ರನ್ ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement