ಸಿಡ್ನಿ: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ತಮ್ಮ ಆತ್ಮಕಥೆ ಪ್ರಕಟಿಸಲಿದ್ದಾರೆ. ಆದರೆ, ಈ ಆತ್ಮಕಥೆ ಪುಸ್ತಕ ರೂಪದಲ್ಲಿರದೇ, ಕಿರುಚಿತ್ರಗಳ ಸರಣಿಯ ಸ್ವರೂಪದ್ದಾಗಿರುತ್ತದೆ. ಈ ಸಾಕ್ಷ್ಯ ಚಿತ್ರದ ಹೆಸರು 'ಮೇಡ್ ಬೈ'.
27 ವರ್ಷದ ವಯಸ್ಸಿನ ಈ ಆಟಗಾರ ಹುಟ್ಟಿದ್ದು, ಬೆಳೆದಿದ್ದು, ವಿದ್ಯಾರ್ಜನೆ ಮಾಡಿದ್ದು, ಟೆನಿಸ್ ಬಗ್ಗೆ ಅಪಾರ ಒಲವು ತಾಳಿದ್ದು, ಆನಂತರ ಜಗತ್ತಿನ ನಂಬರ್ ಒನ್ ಟೆನಿಸ್ ಆಟಗಾರನಾಗಿ ಮಿಂಚಿದ್ದು ...ಹೀಗೆ ಎಲ್ಲವನ್ನೂ ಈ ಕಿರುಚಿತ್ರದಲ್ಲಿ ಹೇಳಲಾಗುತ್ತದೆ. ಇದಕ್ಕಾಗಿ ಕಿರುಚಿತ್ರ ತಯಾರಿಕಾ ಸಂಸ್ಥೆಯನ್ನು ಹುಟ್ಟುಹಾಕಲಿರುವ ಜೊಕೊವಿಚ್, ಆ ಮೂಲಕವೇ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಶುರುವಾಗಲಿದ್ದು, ಅದಕ್ಕೂ ಮುನ್ನವೇ ಕಿರುಚಿತ್ರಗಳ ಎಲ್ಲಾ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಜೊಕೊವಿಚ್ ನಿರ್ಧರಿಸಿದ್ದಾರೆ.