ಕ್ರೀಡೆ

ದುಷ್ಕರ್ಮಿಗಳಿಂದ ಅರ್ಜೆಂಟೀನಾ ಫುಟ್ಬಾಲ್ ಆಟಗಾರನ ಕಗ್ಗೊಲೆ

Vishwanath S

ಬ್ಯೂನೋಸ್ ಐರಿಸ್: ಕ್ರಿಕೆಟ್ ತಾರೆ ಆಸ್ಟ್ರೇಲಿಯಾದ ಫಿಲಿಪ್ ಹ್ಯೂಸ್‌ನ ಸಾವಿನ ಶೋಕ ಕರಗುವ ಮುನ್ನವೇ ಫುಟ್‌ಬಾಲ್ ಆಟಗಾರನ ಸಾವಿನ ಸುದ್ದಿಯೊಂದು ಬಂದೆರಗಿದೆ.

ಅರ್ಜೆಂಟೀನಾದ ಪುಟ್‌ಬಾಲ್ ಆಟಗಾರ ಫ್ರಾಂಕೋ ನೀಟೋ ಸಾವನ್ನಪ್ಪಿದ ದುರ್ದೈವಿ. ಆದರೆ ಈ ಸಾವು ಆಕಸ್ಮಿಕವಲ್ಲ. 33 ವರ್ಷದ ಫ್ರಾಂಕೋ ಶನಿವಾರದ ಕ್ಲಬ್ ಪಂದ್ಯದ ನಂತರ ತಮ್ಮ ಕುಟುಂಬದೊಂದಿಗೆ ಕಾರ್ ಪಾರ್ಕಿಂಗ್‌ನತ್ತ ಹೋಗುತ್ತಿದ್ದಾಗ ಮೂರು ಮಂದಿ ದುಷ್ಕರ್ಮಿಗಳು ಸುತ್ತುವರೆದು ದಾಳಿ ಮಾಡಿದ್ದಾರೆ. ಇಟ್ಟಿಗೆಯಿಂದ ತಲೆಗೆ ಪ್ರಹಾರ ಮಾಡಿದಾಗ ಫ್ರಾಂಕೋ ತಲೆಗೆ ತೀವ್ರವಾಗಿ ಪೆಟ್ಟಾಗಿದೆ.

ತುರ್ತುನಿಗಾದಲ್ಲಿದ್ದ ಫ್ರಾಂಕೋ ಮಂಗಳವಾರದ ಶಸ್ತ್ರಚಿಕಿತ್ಸೆ ಕೂಡ ಫಲ ನೀಡದೆ ಬುಧವಾರ ಮೃತಪಟ್ಟಿದ್ದಾರೆ. ಟೈರೋ ಫೆಡರಲ್ ಎಂಬ ಸ್ಥಳೀಯ ಕ್ಲಬ್‌ನ ನಾಯಕನಾಗಿದ್ದ ನೀಟೋ ಶನಿವಾರ ಚಕಾರಿತಾ ಜೂನಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಎರಡು ತಂಡಗಳ ನಡುವಣ ಘರ್ಷಣೆ ನಡೆದು ಎಂಟು ಆಟಗಾರರನ್ನು ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು.

SCROLL FOR NEXT