ಭುವನೇಶ್ವರ್: ಹಾಟ್ ಫೇವರಿಟ್ ಎನಿಸಿರುವ ಆತಿಥೇಯ ಭಾರತ ತಂಡದ ಆಟಗಾರರು, ಚಾಂಪಿಯನ್ಸ್ ಟ್ರೋಫಿ ಹಾಕಿ ಟೂನಿಯಲ್ಲಿ ಶುಭಾರಂಭ ಮಾಡುವಲ್ಲಿ ವಿಫಲರಾಗಿದ್ದಾರೆ.
ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಟೂರ್ನಿಯ ಬಿ ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಭಾರತದ ಆಟಗಾರರು ಏಕೈಕ ಗೋಲಿನಿಂದ ಜರ್ಮನಿ ತಂಡದ ಎದುರು ಸೋಲಿನ ಕಹಿ ಅನುಭವಿಸಿದರು.
ಪಂದ್ಯದ 60ನೇ ನಿಮಿಷದಲ್ಲಿ ಫ್ಲೋರಿಯನ್ ಫಚಸ್ ಆಕರ್ಷಕ ಗೋಲುಗಳಿಸಿ ಜರ್ಮನಿಗೆ ರೋಚಕ ಗೆಲುವುದ ತಂದುಕೊಟ್ಟರು.
ಒಂದು ಹಂತದಲ್ಲಿ ಪಂದ್ಯ ನೀರಸ ಅಂತ್ಯದಲ್ಲಿ ಡ್ರಾಗೊಳ್ಳುವುದು ಸ್ಪಷ್ಪವೆನಿಸಿತ್ತು. ಆದರೆ, ಆಟ ಮುಗಿಯಲು ಕೇವಲ 40 ಸೆಕೆಂಡುಗಳು ಬಾಕಿ ಇದ್ದಾಗ ಭಾರತದ ರಕ್ಷಣಾ ವಿಭಾಗದಲ್ಲಿ ಕೊಂಚ ಬಿರುಕು ಮೂಡಿದ ಪರಿಣಾಮ ಜರ್ಮನಿ ಪಾಲಿಗೆ ಗೋಲು ಗಳಿಸುವ ಸುವರ್ಣ ಅವಕಾಶ ಲಭಿಸಿತು.
ತಮಗೆ ದೊರೆತ ಅವಕಾಶದಲ್ಲಿ ಜರ್ಮನಿ ಆಟಗಾರರು ಯಶಸ್ವಿಯಾಗುವುದರೊಂದಿಗೆ, ಆತಿಥೇಯ ಸರ್ದಾರ್ ಸಿಂಗ್ ಪಡೆಗೆ ಸೋಲಿನ ಕಹಿ ಉಣಬಡಿಸಿದರು.
ಚಾಂಪಿಯನ್ನರಿಗೆ ಮುಖಭಂಗ
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಆಟಗಾರರು ಪುರುಷರ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರಿ ಆಘಾತ ಅನುಭವಿಸಿದ್ದಾರೆ.
ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು 3-1 ಗೋಲುಗಳಿಂದ ಪ್ರಬಲ ಆಸ್ಟ್ರೇಲಿಯಾ ಪಡೆಗೆ ಸೋಲುಣಿಸಿದರು. ಇದರೊಂದಿಗೆ ಪ್ರಸಕ್ತ ಸಾಲಿನ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯನ್ನರು ತಮ್ಮ 'ಎ' ಗುಂಪಿನಲ್ಲಿ ಉತ್ತಮ ಆರಂಭ ಪಡೆಯಲು ವಿಫಲರಾಗಿದ್ದಾರೆ.
ವಿಜೇತ ಇಂಗ್ಲೆಂಡ್ ತಂಡದ ಪರ ಸ್ಯಾಮುಯೆಲ್ ವಾರ್ಡ್ 27ನೇ ನಿಮಿಷ ಮತ್ತು 56ನೇ ನಿಮಿಷ ಹಾಗೂ ಅಲಸ್ಟೆರ್ ಬ್ರಾಗ್ಡನ್ 6ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದರು. ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯದ 54ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಕ್ರಿಸ್ ಸಿರಿಯೆಲೊ ಗೋಲು ಗಳಿಸಿಕೊಟ್ಟರು.
ಪಾಕಿಸ್ತಾನಕ್ಕೆ ಸೋಲು
ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಬೆಲ್ಜಿಯಂ ತಂಡ 2-1 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಪರಾಭವಗೊಳಿಸಿತು.
ಅದೇ ರೀತಿ ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಹಾಲೆಂಡ್ ಆಟಗಾರರು, 3-0 ಗೋಲುಗಳಿಂದ ಅರ್ಜೆಂಟಿನಾ ತಂಡವನ್ನು ಪರಾಭವಗೊಳಿಸಿ ಶುಭಾಂರಭ ಮಾಡಿದರು.