ಕ್ರೀಡೆ

ಬೌಲಿಂಗ್‌ನಿಂದ ಹಫೀಜ್ ಅಮಾನತು

ದುಬೈ: ನಿಯಮಬಾಹಿರ ಶೈಲಿಯ ಕಾರಣ ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್‌ರೌಂಡರ್ ಮೊಹಮ್ಮದ್ ಹಫೀಜ್‌ಗೆ ಬೌಲಿಂಗ್ ಮಾಡುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅಮಾನತುಗೊಳಿಸಿದೆ.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಅಬುಧಾಬಿಯಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಹಫೀಜ್ ಬೌಲಿಂಗ್ ಶೈಲಿ ನಿಯಮಬಾಹಿರವಾಗಿದೆ ಎಂದು ದೂರು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಅವರ ಶೈಲಿಯನ್ನು ಪರೀಕ್ಷೆಗೆ ಒಳಪಡಿಸಿದ ನಂತರ 34ರ ಆಫ್ ಸ್ಪಿನ್ನರ್ ಹಫೀಜ್ ಶೈಲಿ ನಿಯಮದ ವಿರುದ್ಧವಿದೆ ಎಂಬುದು ದೃಢಪಟ್ಟಿದೆ. ಹಾಗಾಗಿ ತಕ್ಷಣ ಜಾರಿಗೆ ಬರುವಂತೆ, ಹಫೀಜ್‌ರನ್ನು ಬೌಲಿಂಗ್‌ನಿಂದ ಅಮಾನತುಗೊಳಿಸಿ ಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಮುಂದಿನ ವರ್ಷ ಆಸ್ಟ್ರೇಲಿಯಾ-ನ್ಯೂಜಿಲೆಂಡ್‌ಗಳಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗಾಗಿ ಪ್ರಕಟಿಸಲಾಗಿರುವ ಪಾಕಿಸ್ತಾನ ತಂಡದ 30 ಆಟಗಾರರ ಸಂಭಾವ್ಯರ ಪಟ್ಟಿಯಲ್ಲಿ ಹಫೀಜ್‌ಗೂ ಸ್ಥಾನ ನೀಡಲಾಗಿತ್ತು. ಆದರೆ, ಬೌಲಿಂಗ್‌ನಿಂದಲೇ ಅವರನ್ನು ಅಮಾನತುಗೊಳಿಸಿರುವುದು ನಿಜಕ್ಕೂ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಿದೆ

SCROLL FOR NEXT