ಭುವನೇಶ್ವರ: ಆರಂಭದಲ್ಲಿ ನೀರಸ ಪ್ರದರ್ಶನ ನೀಡುತ್ತ ಆತಂಕದ ಛಾಯೆ ಮೈಮೇಲೆ ಎಳೆದುಕೊಂಡಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ಆಟಗಾರರು ನಂತರದ ಹಾದಿಯಲ್ಲಿ ಮೈಕೊಡವಿ ಮೇಲೆದ್ದು ಬರುವ ಮೂಲಕ ಈಗ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಡಲು ಯೋಚಿಸುತ್ತಿದ್ದಾರೆ.
ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದದಲ್ಲಿ ಭಾರತ ಮತ್ತಕು ಪಾಕಿಸ್ತಾನ ಆಟಗಾರರು ಪರಸ್ಪರ ಮುಖಾಮುಖಿಯಾಗಲಿದ್ದು, ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
ಮೆಲ್ಬೋನ್‌ನಲ್ಲಿ ನಡೆದ 2012ರ ಕಳೆದ ಆವೃತ್ತಿಯಲ್ಲಿ ಈ ಟೂರ್ನಿಯಲ್ಲಿ ಕಂಚಿನ ಪದಕಕ್ಕಾಗಿ ಉಭಯ ತಂಡಗಳು ಸೆಣಸಿದಾಗ ಭಾರತ ಸೋಲನುಭವಿಸಿತ್ತು . ಈ ಬಾರಿ ಅದಕ್ಕೆ ತಕ್ಕ ಸೇಡು ತೀರಿಸಿಕೊಳ್ಳಲು ಭಾರತದ ಮುಂದೆ ಉತ್ತಮ ಅವಕಾಶವಿದೆ.
ತವರು ನೆಲ ಹಾಗೂ ಪ್ರೇಕ್ಷಕರ ಬೆಂಬಲ ಭಾರತದ ಆಟಗಾರರಿಗೆ ಸ್ಫೂರ್ತಿ ತುಂಬಿದೆ. ಇದೇ ಸಾಲಿನ ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಚಾಂಪಿಯನ್ ಆಗಿದ್ದ ಸರ್ದಾರ್ ಸಿಂಗ್ ಪಡೆಗೆ 2016ರ ರಿಯೋ ಒಲಿಂಪಿಕ್ಸ್‌ಗೂ ನೇರ ಪ್ರವೇಶ ದೊರೆತಾಗಿದೆ.
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಹಾಕಿ ಇತಿಹಾಸ ದೀರ್ಘಾವಧಿಯದ್ದಾಗಿದೆ. ಮೊದಲ ಆರು ಏಷ್ಯನ್ ಗೇಮ್ಸ್ ಫೈನಲ್‌ಗಳಲ್ಲಿ ಈ ಎರಡೇ ತಂಡಗಳು ಪರಸ್ಪರ ಸೆಣಸಿದ್ದವು. ಅಲ್ಲದೆ, ಪರಸ್ಪರ ಏಳು ಬಾರಿ ಫೈನಲ್‌ನಲ್ಲಿ ಎದುರಾಗಿದ್ದು, ಈ ಪೈಕಿ ಪಾಕಿಸ್ತಾನ 6ರಲ್ಲಿ ಜಯ ಸಾಧಿಸಿದ್ದರೆ, ಭಾರತ 1 ರಲ್ಲಿ ಮಾತ್ರ ಯಶಸ್ಸು ಕಂಡಿದೆ.
1956ರಿಂದ 1964ರವರೆಗೆ ಉಭಯ ತಂಡಗಳು ಸತತ ಮೂರು ಒಲಿಂಪಿಕ್ಸ್ ಹಾಕಿ ಫೈನಲ್‌ಗಳಲ್ಲಿ ಸೆಣಸಿದ್ದು, ಭಾರತ ಎರಡರಲ್ಲಿ ಗೆಲವು ದಾಖಲಿಸಿ ತನ್ನ ಪ್ರಭುತ್ವ ಮೆರೆದಿದ್ದರೆ, ಪಾಕ್, ಒಂದು ಬಾರಿಯಷ್ಟೇ ಸಫಲವಾಗಿದೆ.
ಭಾರತ ಮತ್ತು ಪಾಕಿಸ್ತಾನ ತಮ್ಮ ಗುಂಪು ಸೆಣಸಿನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. 'ಬಿ' ಗುಂಪಿನಲ್ಲಿ ಸೆಣಸಿದ್ದ ಭಾರತ, ಮೊದಲೆರಡು ಲೀಗ್ ಪಂದ್ಯಗಳಲ್ಲಿ ಜರ್ಮನಿ ಮತ್ತು ಅರ್ಜೆಂಟೀನಾ ಎದುರು ತಲೆಬಾಗಿಸಿತ್ತು.
ಆದರೆ, ಕೊನೆಯ ಲೀಗ್‌ನಲ್ಲಿ ಪ್ರಬಲ ಹಾಲೆಂಡ್‌ಗೆ 3-2 ರಿಂದ ಆಘಾತ ನೀಡಿ ಮೊದಲ ಜಯ ಸಂಪಾದಿಸಿದ ತೃಪ್ತಿಗೆ ಒಳಗಾಗಿತ್ತು. ಬಳಿಕ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 4-2ರಿಂದ ಜಯ ದಾಖಲಿಸಿತ್ತು. ಪಾಕಿಸ್ತಾನ 'ಎ' ಗುಂಪಿನಲ್ಲಿ ತಾನಾಡಿದ ಎಲ್ಲ ಮೂರೂ ಲೀಗ್ ಪಂದ್ಯಗಳಲ್ಲಿ ಬರೀ ಸೋಲುಗಳನ್ನೇ ಕಂಡಿತ್ತು. ಆದರೆ, ಎಂಟರಘಟ್ಟದಲ್ಲಿ ಮಾತ್ರ ಶಕ್ತಿಶಾಲಿ ಹಾಲೆಂಡ್‌ಗೆ 4-2 ಗೋಲುಗಳ ಆಘಾತ ನೀಡಿ ಸೆಮಿಫೈನಲ್‌ನಲ್ಲಿ ನಿಂತಿದೆ.
ಇಂದು ಸೆಮಿಫೈನಲ್ ಸುತ್ತು
ಭಾರತ- ಪಾಕಿಸ್ತಾನ (ಸಂಜೆ 5.15ಕ್ಕೆ)
ಆಸ್ಟ್ರೇಲಿಯಾ - ಜರ್ಮನಿ ( ರಾತ್ರಿ 7.30ಕ್ಕೆ)