ದೇವನಹಳ್ಳಿ: ದಕ್ಷಿಣ ಆಫ್ರಿಕಾದಲ್ಲಿ ನಡೆದ ದೃಷ್ಟಿ ವಿಚೇತನರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಭಾರತ ತಂಡದ ಆಟಗಾರರು ಶನಿವಾರ ಬೆಳಗ್ಗೆ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ನೂರಾರು ಮಂದಿ ಅಭಿಮಾನಿಗಳಿಂದ ಭವ್ಯ ಸ್ವಾಗತ ದೊರೆಯಿತು.
ತಂಡದ ನಾಯಕ ಶೇಖರ್ ನಾಯಕ್, ಪ್ರಕಾಶ್ ಜಯರಾಮಯ್ಯ, ವೀರೇಶ್, ವೆಂಕಟೇಶ ರೆಡ್ಡಿ , ಅಜಯ್ ರೆಡ್ಡಿ ಹಾಗೂ ರಮೇಶ್ ಅಲ್ಲದೆ ಕೋಚ್ ಆದ ಪ್ಯಾಟ್ರಿಕ್ ರಾಜಕುಮಾರ್ ದೆಹಲಿಯಿಂದ ಇಲ್ಲಿನ ವಿಮಾನ ನಿಲ್ದಾಣತಕ್ಕೆ ಆಗಮಿಸಿದರು. ತಂಡದ ಎಲ್ಲ ಆಟಗಾರರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಜಿತೇಂದ್ರ ಶೆಟ್ಟಿ ಹಾಗೂ ಅಧಿಕಾರಿಗಳಾದ ವೆಂಕಟೇಶ್ ಮತ್ತು ಬಸವರಾಜು ಅಲ್ಲದೆ ಬೆಂಗಳೂರಿನ ಸಮರ್ಥಂ ಅಂಗವಿಕಲ ಸಂಸ್ಥೆಯ ಆಡಳಿತಾಧಿಕಾರಿ ದೇವರಾಜ್, ಮ್ಯಾನೇಜಿಂಗ್ ಟ್ರಸ್ಟಿಗಳಾದ ಜಿ.ಕೆ ಮಹಂತೇಶ್, ಸವಣೂರು ವಸಂತಿ ಹಾಗೂ ಎಸ್.ಪಿ ನಾಗೇಶ್ ಇವರೊಂದಿಗೆ ನೂರಾರು ದೃಷ್ಟಿ ಕಾರ್ಯಕರ್ತರು ಮತ್ತು ಮಹಿಳೆಯರು ವಿಜೇತ ಆಟಗಾರರಿಗೆ ಆರತಿ ಬೆಳಗಿ ತಿಲಕವಿಟ್ಟು ಹಾರ ಹಾಕಿ ತಮಟೆಗಳ ಬಡಿತದೊಂದಿಗೆ ಜೈಕಾರ ಹಾಕುತ್ತಾ ಬರಮಾಡಿಕೊಂಡರು.
ಸ್ವಾಗತಕೋರಿದ ಪತ್ನಿ: ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಭಾರತ ತಂಡದ ನಾಯಕರಾಗಿದ್ದ ಶೇಖರ್ ನಾಯಕ್ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ನಿ ರೂಪ ಆನಂದದಿಂದ ಅಪ್ಪಿಕೊಂಡು ಸಂತೋಷ ವ್ಯಕ್ತಪಡಿಸಿದರಲ್ಲದೆ, ನನ್ನ ಜೀವನದಲ್ಲಿ ತಮ್ಮ ಪತಿಯ ಏಳಿಗೆಯೇ ನನಗೆ ಸಂತೋಷ ತಂದಿದೆ ಎಂದರು.