ಭುವನೇಶ್ವರ: ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಗೆದ್ದ ಬಳಿಕ ದುರ್ವರ್ತನೆ ತೋರಿದ್ದ ಪಾಕಿಸ್ತಾನ ಹಾಕಿ ತಂಡದ ಇಬ್ಬರು ಆಟಗಾರರನ್ನು ಅಮಾನತು ಮಾಡಲಾಗಿದೆ.
ಪಾಕಿಸ್ತಾನ ಹಾಕಿ ಆಟಗಾರರಾದ ಮುಹಮ್ಮದ್ ತೌಶಿಕ್ ಮತ್ತು ಅಲಿ ಅಮ್ಜಾದ್‌ನನ್ನು ಅಮಾನತು ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಹಾಕಿ ಒಕ್ಕೂಟ(ಎಫ್‌ಎಚ್‌ಐ) ಹೇಳಿದೆ.
ಸಾಮಾಜಿಕ ಮಾಧ್ಯಮದಲ್ಲಿ ಆಟಗಾರರ ದುರ್ವರ್ತನೆಯ ಚಿತ್ರಗಳು ಬಿತ್ತರಗೊಂಡಿದ್ದು ಈ ಆಧಾರದ ಮೇಲೆ ಈ ಇಬ್ಬರು ಆಟಗಾರರನ್ನು ಎಫ್‌ಎಚ್‌ಐ ಅಮಾನತು ಮಾಡಿದ್ದು, ಜರ್ಮನಿ ವಿರುದ್ಧದ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಈ ಇಬ್ಬರು ಆಡುವ ಅವಕಾಶ ಅವಕಾಶ ವಂಚಿತರಾಗಿದ್ದಾರೆ.
ನಿನ್ನೆ ಒಡಿಶಾದ ಭುವನೇಶ್ವರದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಭಾರತ ತಂಡವನ್ನು 4-3ರಿಂದ ಮಣಿಸಿದ್ದ ಪಾಕಿಸ್ತಾನ ಆಟಗಾರರು ಗೆಲುವು ಖಾತರಿಯಾಗುತ್ತಿದ್ದಂತೆಯೇ ಮೈದಾನದಲ್ಲಿಯೇ ತಮ್ಮ ತಮ್ಮ ಶರ್ಟ್‌ಗಳನ್ನು ಬಿಚ್ಚಿ ಪ್ರೇಕ್ಷಕರತ್ತ ಅಸಭ್ಯ ಚಿಹ್ನೆಗಳನ್ನು ಮಾಡುತ್ತ ದುರ್ವರ್ತನೆ ತೋರಿದ್ದರು.