ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಮಾಲೀಕತ್ವವನ್ನು ಎನ್.ಶ್ರೀನಿವಾಸನ್ ಅವರು ವಹಿಸಿಕೊಳ್ಳದಿದ್ದರೆ, ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ವಿವರಣೆ ಕೊಡುವಂತೆ ಸುಪ್ರೀಂಕೋರ್ಟ್ ಬಿಸಿಸಿಐಗೆ ಸೂಚಿಸಿದೆ.
ನ್ಯಾ.ಮುಕುಲ್ ಮುದ್ಗಲ್ ಸಮಿತಿ ಸಲ್ಲಿಸಿರುವ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ತನಿಖಾ ವರದಿಗೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂಕೋರ್ಟ್ ಮತ್ತೆ ವಿಚಾರಣೆ ಆರಂಭಿಸಿತು. ನ್ಯಾ.ಟಿಎಸ್ ಠಾಕೂರ್ ಮತ್ತು ಫಕೀರ್ ಮೊಹಮದ್ ಇಬ್ರಾಹಿಂ ಅವರನ್ನೊಳಗೊಂಡ ಪೀಠವು, ಒಂದು ವೇಳೆ ನಿಮ್ಮ ಅಧ್ಯಕ್ಷರು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಿಂದ ಹೊರಗುಳಿದರೆ ಅದು ಐಪಿಎಲ್, ಚಾಂಪಿಯನ್ಸ್ ಲೀಗ್ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಪ್ರಶ್ನೆ ಮಾಡಿತು.
ಅಲ್ಲದೆ ಈ ಕುರಿತು ವಿವರಣೆ ನೀಡಬೇಕು ಎಂದು ಹೇಳಿತು. ಶ್ರೀನಿ ಹೊರತಾಗಿ ಮತ್ತಾರು ತಂಡ ಆಡಳಿತ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಸದಸ್ಯ ಸಿಎಸ್ ಸುಂದರಮ್ ಸುಪ್ರೀಂಗೆ ತಿಳಿಸಿದರು. ಬುಧವಾರ ಮತ್ತೆ ವಿಚಾರಣೆ ಮುಂದುವರಿಯಲಿದೆ.