ಪುಣೆ: ವಿಶ್ವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಆತ್ಮಚರಿತ್ರೆ 'ಪ್ಲೇಯಿಂಗ್ ಇಟ್ ಮೈ ವೇ' ಅನ್ನು ಮುಂದಿನ ಆರು ತಿಂಗಳ ಅವಧಿಯಲ್ಲಿ 8 ಭಾಷೆಗಳಲ್ಲಿ ಹೊರತರಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕಾಶಕರಾದ ಹ್ಯಾಚೆಟ್ ಇಂಡಿಯಾ ಸಂಸ್ಥೆಯು ಮರಾಠಿಯಲ್ಲಿ ಆತ್ಮಚರಿತ್ರೆಯನ್ನು ಹೊರ ತರಲು ಪುಣೆ ಮೂಲದ ಮೆಹ್ತಾ ಪಬ್ಲಿಷಿಂಗ್ ಹೌಸ್ ಜತೆ ಒಪ್ಪಂದ ಮಾಡಿಕೊಂಡಿದೆ.
ಬುಧವಾರ ಮೆಹ್ತಾ ಪಬ್ಲಿಷಿಂಗ್ ಹೌಸ್‌ನ ಸಂಸ್ಥಾಪಕ ಅನಿಲ್ ಮೆಹ್ತಾ ಈ ವಿಷಯವನ್ನು ತಿಳಿಸಿದ್ದು, ಮೊದಲು ಮರಾಠಿ ಭಾಷೆಯಲ್ಲಿ ಆತ್ಮ ಚರಿತ್ರೆಯನ್ನು ಹೊರತರಲಾಗುವುದು. ನಂತರ ಇತರೆ ಭಾಷೆಗಳಲ್ಲಿ ಆತ್ಮಚರಿತ್ರೆ ಬರಲಿದೆ.
ಆತ್ಮಚರಿತ್ರೆ ಅನುವಾದದ ಹಂತದಲ್ಲಿದ್ದು, ಮುಂದಿನ ವರ್ಷ ಮಾರ್ಚ್‌ನಲ್ಲಿ ಹೊರ ಬರುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಮರಾಠಿ ಭಾಷೆ ಹೆಚ್ಚಿನ ಬೇಡಿಕೆ ಇರುವ ನಿಟ್ಟಿನಲ್ಲಿ 50 ಸಾವಿರ ಪ್ರತಿಗಳನ್ನು ಮುದ್ರಿಸುವ ಯೋಚನೆ ಇದೆ. ಪ್ರತಿ ಬೆಲೆ 600 ಎಂದು ಮೆಹ್ತಾ ತಿಳಿಸಿದ್ದಾರೆ. ಮರಾಠಿ ಜತೆಗೆ ಹಿಂದಿ, ಮಲಯಾಳಂ, ಬಂಗಾಳಿ, ಅಸ್ಸಾಂ, ತೆಲುಗು, ತಮಿಳು ಹಾಗೂ ಗುಜರಾತಿ ಭಾಷೆಯಲ್ಲಿ ತರಲು ನಿರ್ಧರಿಸಲಾಗಿದೆ.