ಬೆಂಗಳೂರು: ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಹಾಗೂ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ವತಿಯಿಂದ ಆಯೋಜಿಸಲಾಗುವ 13ನೇ ವಾಜಪೇಯಿ ಕಪ್ ರಾಷ್ಟ್ರೀಯ ವಾಲಿಬಾಲ್ ಟೂರ್ನಿ ಡಿಸೆಂಬರ್ 21ರಿಂದ 25ರವರೆಗೆ ನಡೆಯಲಿದೆ.
ರಾಜಾಜಿನಗರ ವಿವೇಕಾನಂದ ಮೈದಾನದಲ್ಲಿ ಐದು ದಿನಗಳ ಕಾಲ ಈ ಪಂದ್ಯಾವಳಿ ನಡೆಯಲಿದ್ದು, ಒಟ್ಟು 6 ರಾಜ್ಯ ತಂಡಗಳು ಭಾಗವಹಿಸಲಿವೆ ಎಂದು ರಾಜ್ಯ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಬಚ್ಚೇಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಸರ್ವಿಸಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಈ ಬಾರಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ವಿಜೇತರಿಗೆ ತಲಾ ರೂ.2.5 ಲಕ್ಷ ಬಹುಮಾನ ಮೊತ್ತ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆಯ ಮಾಜಿ ಉಪ ಮಹಾಪೌರ ಎಸ್.ಹರೀಶ್, ಈ ಬಾರಿಯ ಪಂದ್ಯಾವಳಿಯಲ್ಲಿ ಕೇವಲ ಕ್ರೀಡೆಗೆ ಮಾತ್ರವಲ್ಲದೆ ಸಾಂಸ್ಕೃತಿಕ ಕಲೆಗೂ ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಈ ಬಾರಿಯ ಪಂದ್ಯಾವಳಿ, ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ಗೆ ತಯಾರಿ ನಡೆಸಲು ಉತ್ತಮ ವೇದಿಕೆಯಾಗಲಿದೆ. ಹಾಗಾಗಿ ಈ ಪಂದ್ಯಾವಳಿ ಹೆಚ್ಚು ಆಸಕ್ತಿ ಮೂಡಿಸಿದೆ. ಪಂದ್ಯಾವಳಿ ವೀಕ್ಷಿಸಲು 5 ಸಾವಿರ ಸಾಮರ್ಥ್ಯದ ಪ್ರೇಕ್ಷಕರ ಗ್ಯಾಲರಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.