ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರಾಜ ಸಂಜು!

ಕೇರಳದ ಖದರ್ರೇ ಬೇರೆ. ದೇಶ ಒಂದು ಆಲೋಚಿಸಿದರೆ, ಅದು ಭಿನ್ನವಾಗಿ ಯೋಚಿಸುತ್ತಿರುತ್ತದೆ. ಇದು ಅಲ್ಲಿನ ಜನಜೀವನದಿಂದ, ಸಾಹಿತ್ಯ...

Rashmi Kasaragodu
Updated On : 14 Feb 2014, 4:20 am

ಕೇರಳದ ಖದರ್ರೇ ಬೇರೆ. ದೇಶ ಒಂದು ಆಲೋಚಿಸಿದರೆ, ಅದು ಭಿನ್ನವಾಗಿ ಯೋಚಿಸುತ್ತಿರುತ್ತದೆ. ಇದು ಅಲ್ಲಿನ ಜನಜೀವನದಿಂದ, ಸಾಹಿತ್ಯ, ರಾಜಕೀಯ ಯಾಕೆ ಕ್ರೀಡೆಯನ್ನೂ ಬಿಟ್ಟಿಲ್ಲ. ಭಾರತಕ್ಕೆ ಭಾರತವೇ ಕ್ರಿಕೆಟ್ ಹುಚ್ಚಿನಲ್ಲಿ ತೇಲಿದರೆ, ಫುಟ್ಬಾಲ್ ಹುಚ್ಚಿನಲ್ಲಿ ಮುಳುಗಿದ್ದರವರು. ಹೀಗಾಗಿ ಅಲ್ಲಿನ ಯುವಕರು ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸ್ಥೆಯನ್ನೇ ತೋರಲಿಲ್ಲ ಎನ್ನಬಹುದೇನೋ. ರಣಜಿಯಲ್ಲೊಬ್ಬ ಓಯಸಿಸ್ ಥರಾ ಕಂಡದ್ದು ಬಿಟ್ಟರೆ ಹೇಳಿಕೊಳ್ಳುವಂಥ ಆಟಗಾರರ್ಯಾರೂ ಕಾಣಿಸಿಕೊಳ್ಳಲೇ ಇಲ್ಲ. ಭಾರತದ ಯಾವ ಮೂಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದರೂ ಜನ ಸಾಗರ ನೆರೆಯುವ ಹಾಗೆ ಕೊಚ್ಚಿಯಲ್ಲಿ ನಡೆಯುವ ಪಂದ್ಯಗಳಲ್ಲೂ ಕ್ರೀಡಾಂಗಣ ಭರ್ತಿಯಾದವೇ ಹೊರತು, ಅದೇನೂ ಕೇರಳಿಗರಲ್ಲಿ ವಿಶೇಷ ಪ್ರೀತಿ ಹುಟ್ಟಿಸಿರಬಹುದೆಂದು ಹೇಳಲಾಗದು.
ಇಂತಿಪ್ಪ ನಾಡಿನಲ್ಲಿ ಕ್ರಿಕೆಟ್ ಹುಚ್ಚನ್ನು ಹುಟ್ಟು ಹಾಕಿದವನು ಶ್ರೀಶಾಂತ್. ಆಕ್ರಮಣಕಾರಿ ದಾಳಿಗೆ ಹೆಸರಾಗಿದ್ದ ಈತ ಕಳ್ಳಾಟದಲ್ಲಿ ಸಿಲುಕಿ ಕಣದಿಂದ ಹೊರಬಿದ್ದಾಗ ಮಲ್ಲುಗಳ ಕನಸುಗಳೆಲ್ಲಾ ಅಕ್ಷರಶಃ ಛಿದ್ರವಾಗಿದ್ದವು. ಇದಾದ ನಂತರವೂ ಕೇರಳಿಗರು ಮತ್ತೆ ಸಂಭ್ರಮದಲ್ಲಿದ್ದಾರೆ. ಕಾರಣ ಸಂಜು ಸ್ಯಾಮ್ಸನ್ ಎಂಬ ಪ್ರತಿಭೆ. ಐಪಿಎಲ್‌ನಲ್ಲಿ ಈತ ನಿರ್ಭಯದಿಂದ ಬ್ಯಾಟ್ ಬೀಸಲಾರಂಭಿಸಿದಾಗ, ವರ್ಷದ ಬಿರುಗಾಳಿಯಷ್ಟೇ ಎಂದು ಹಲವರು ಎಣಿಸಿದ್ದರು. ಕಾರಣ ಪ್ರತಿಬಾರಿಯೂ ಐಪಿಎಎಲ್‌ನಲ್ಲಿ ಹೊಸ ಹೀರೋ ಕಾಣಿಸಿಕೊಳ್ಳುತ್ತಾನೆ. ಮುಂದಿನ ವರ್ಷಕ್ಕೆ ಅಷ್ಟೇ ವೇಗವಾಗಿ ಮೂಲೆಗುಂಪಾಗಿರುತ್ತಾನೆ. ಮನ್‌ಪ್ರೀತ್ ಗೋನಿ, ಪಾವ್ ವಾಲ್ತಾಟಿ ಇದೇ ಸಾಲಿಗೆ ಸೇರಿದವರು.

ಇಂವಾ ಮಾತ್ರ ಹಾಗಲ್ಲ
ಸಂಜು ಈ ವಿಷಯದಲ್ಲಿ ಭಿನ್ನವಾಗಿ ನಿಲ್ಲುತ್ತಾನೆ. ಮೊನ್ನೆಯಷ್ಟೇ ಶಾರ್ಜಾದಲ್ಲಿ ನಡೆದ 19 ವರ್ಷದೊಳಗಿನ ಏಷ್ಯಾ ಕಪ್ ಇದಕ್ಕೆ ಸಾಕ್ಷಿ. ಪಾಕಿಸ್ತಾನ ವಿರುದ್ಧ ನಾಯಕ ವಿಜಯ್ ಜೋಲ್ ಜತೆಗೂಡಿ ಆಡಿದ ಪರಿ ಆತನ ಪರಿಪಕ್ವತೆ ಸಾರಿತ್ತು. ಈ ಬಾರಿಯ ರಣಜಿಯ ಮೊದಲ ಪಂದ್ಯದಲ್ಲಿ ಗುವಾಹಟಿ ತಂಡದ ವಿರುದ್ಧ ಬಾರಿಸಿದ ದ್ವಿಶತಕ (211) ಆತನ ರನ್ ದಾಹವನ್ನು ತೆರೆದಿಟ್ಟಿದೆ.
ಬಾಲ್ಯದಿಂದಲೇ ಕ್ರಿಕೆಟಿಗನಾಗಬೇಕೆಂಬ ಸಂಜು ಕನಸಿಗೆ ನೀರೆರೆದಿದ್ದು ತಂದೆ ಸ್ಯಾಮ್ಸನ್ ವಿಶ್ವನಾಥ್. ದೆಹಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದ ಅವರು ಮಗನ ಕ್ರಿಕೆಟ್ಟನ್ನು ಔನ್ನತ್ಯಕ್ಕೊಯ್ಯಲು ಕೆಲಸಕ್ಕೇ ತಿಲಾಂಜಲಿ ಇತ್ತರು. ರಾಜಸ್ಥಾನ್ ರಾಯಲ್ಸ್ ತಂಡದ ದ್ರಾವಿಡ್ ಶೋಧಗಳಲ್ಲಿ ಸಂಜು ಸ್ಯಾಮ್ಸನ್ ಒಬ್ಬರು. ಮಹಾಗೋಡೆ ಯಾರನ್ನೂ ಸುಮ್ಮನೆ ಹೊಗಳಿದ್ದಂತೂ ಇಲ್ಲ. ಶ್ರದ್ಧೆ ಇಲ್ಲದ ಆಟಗಾರರನ್ನು ಅವರು ಸಹಿಸುವುದೂ ಇಲ್ಲ. ಆದರೆ, ಅಜಿಂಕ್ಯೆ ರಹಾನೆ ಹಾಗೂ ಸಂಜು ಸ್ಯಾಮ್ಸನ್‌ರನ್ನು ಮನಸಾರೆ ಮೆಚ್ಚಿದ್ದಾರೆ, ಹೊಗಳಿದ್ದಾರೆ. ಈ ಇಬ್ಬರು ಆಟಗಾರರಿಗೂ ದ್ರಾವಿಡ್ ಎಂದರೆ ಅಚ್ಚುಮೆಚ್ಚು. ರಹಾನೆಯಂತೂ ದ್ರಾವಿಡ್ ಪಡಿಯಚ್ಚು. ಸಂಜುವನ್ನು ಹಾಗೆಂದು ಹೇಳಬರುವುದಿಲ್ಲವಾದರೂ ದ್ರಾವಿಡ್ ಪ್ರಭಾವವಂತೂ ಈತನ ಮೇಲೆ ದಟ್ಟವಾಗಿದೆ.
ವಿಜಯ್ ಜೋಲ್, ಕೆ.ಎಲ್. ರಾಹುಲ್ ಮುಂತಾದವರೊಂದಿಗೆ ಭಾರತದ ಭವಿಷ್ಯದ ಬೆಳಕಾಗಿ ಹೊರಹೊಮ್ಮುತ್ತಿರುವ ಈ ಪೋರನ ವಯಸ್ಸು ಇನ್ನೂ 19 ಅಷ್ಟೇ. ಅಂಡರ್ 19 ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿರುವ ಈತನ ಆಟದ ಕಡೆಗೆ ಇದೀಗ ಕೇರಳ ಮಾತ್ರವಲ್ಲ, ಸಮಸ್ತ ಭಾರತಕ್ಕೇ ಸಹಸ್ರ ನಿರೀಕ್ಷೆಗಳಿವೆ.


-ಜಿಪಿಕೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement