ತಲೆಮಾರಿನ ಕ್ರಿಕೆಟರ್ ಪ್ರಶಸ್ತಿಗೆ ಸಚಿನ್ ಹೆಸರು
ನವದೆಹಲಿ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹವಾಗ್ ಅವರ ಹೆಸರನ್ನು ಇಎಸ್ಪಿಎನ್ಕ್ರಿಕ್ಇನ್ಫೋ20 ಕ್ರಿಕೆಟರ್ ಆಫ್ ದ ಜೆನರೇಷನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಕ್ರಿಕೆಟ್ ವೆಬ್ಸೈಟ್ ಏಳನೇ ಬಾರಿಗೆ ವಾರ್ಷಿಕ ಪ್ರಶಸ್ತಿ ಪ್ರಧಾನವನ್ನು ಮಾಡುತ್ತಿದ್ದು, ಈ ಬಾರಿ ಹೆಚ್ಚುವರಿಯಾಗಿ ಎರಡು ವಿಭಾಗಗಳನ್ನು ಸೇರಿಸಿದೆ. ಅದರಲ್ಲಿ ಕ್ರಿಕೆಟರ್ ಆಫ್ ದ ಜೆನರೇಷನ್ ಹಾಗೂ ಕಾಂಟ್ರಿಬ್ಯೂಷನ್ ಟು ಕ್ರಿಕೆಟ್ ಎಂಬ ಪ್ರಶಸ್ತಿಗಳನ್ನು ನೀಡಲಾಗುವುದು.
ಈ ಪ್ರಶಸ್ತಿಯನ್ನು ಪಡೆಯಲು ಆಯ್ಕೆಯಾಗಿರುವವರಲ್ಲಿ ಆಸ್ಟ್ರೇಲಿಯಾದ ಶೇನ್ ವಾರ್ನ್, ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ, ಶ್ರೀಲಂಕಾದ ಮುತ್ತಯ್ಯ ಮುರಳಿಧರನ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಸಹ ಇದ್ದಾರೆ.
ಈ ವೆಬ್ಸೈಟ್ನ 20 ವರ್ಷಾಚರಣೆಯ ಸಮಾರಂಭದಲ್ಲಿ ಕಳೆದ 20 ವರ್ಷದಲ್ಲಿನ ಅತ್ಯುತ್ತಮ ಕ್ರಿಕೆಟರ್ ಅನ್ನು ಆಯ್ಕೆ ಮಾಡಲು ಪ್ರಸ್ತುತ ಹಾಗೂ ಮಾಜಿ ಕ್ರಿಕೆಟರ್ಗಳು ಹಾಗೂ ಕ್ರಿಕೆಟ್ ಬರಹಗಾರರನ್ನು ಒಳಗೊಂಡ 50 ಮಂದಿಯ ತೀರ್ಪುಗಾರರನ್ನು ಆಯ್ಕೆ ಮಾಡಲಾಗಿದೆ.
ಇನ್ನು ಕಾಂಟ್ರಿಬ್ಯೂಷನ್ ಟು ಕ್ರಿಕೆಟ್ ಪ್ರಶಸ್ತಿ ವಿಜೇತರನ್ನು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಆಯ್ಕೆ ಮಾಡಲಿದ್ದಾರೆ. ಈ ವಿಭಾಗದಲ್ಲಿ ಕ್ರೀಡೆಗೆ ಪ್ರತಿಯೊಂದು ವಿಭಾಗದಿಂದಲೂ ಸೇವೆ ಮಾಡಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು. ಅದರಲ್ಲಿ ಪಿಚ್ ಕ್ಯುರೇಟರ್ನಿಂದ ಅಂಪೈರ್, ತಳಮಟ್ಟದಲ್ಲಿ ಕ್ರೀಡೆಯ ಅಭಿವೃದ್ಧಿಗೆ ಕಾರಣರಾದವರನ್ನು ಆಯ್ಕೆ ಮಾಡಲಾಗುವುದು.
ಈ ಪ್ರಶಸ್ತಿ ವಿಭಆಗದಲ್ಲಿ ಕ್ರೀಡೆಗಾಗಿ ಪರಿಶ್ರಮ, ಬದ್ಧತೆ, ಕ್ರೀಡಾ ಮನೋಭಾವ, ಕ್ರೀಡೆಗಾಗಿ ತ್ಯಾಗ ಮಾಡಿದ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಈ ಪ್ರಶಸ್ತಿಗೆ ವಿವಿಧ ಅಂಶಗಳಿಂದ ಸಾಕಷ್ಟು ಮಂದಿ ಸ್ಪರ್ಧೆಯಲ್ಲಿದ್ದಾರೆ ಎಂದು ದ್ರಾವಿಡ್ ತಿಳಿಸಿದ್ದಾರೆ.