ವಿಶ್ವಕಪ್ ಟಿ-20 ಟೂರ್ನಿಗೆ ಬಾಂಗ್ಲಾದೇಶ ತಂಡ ಪ್ರಕಟ
ಢಾಕಾ: ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅಬ್ದುರ್ ರಜಾಕ್ ಹಾಗೂ ಪ್ರತಿಭಾನ್ವಿತ ಯುವ ಬ್ಯಾಟ್ಸ್ಮನ್ ಸಬ್ಬೀರ್ ರೆಹಮಾನ್ ಅವರು ತವರಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ಶಿಪ್ಗಾಗಿ ಬಾಂಗ್ಲಾದೇಶ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸ್ನಾಯು ಸೆಳೆತದಿಂದಾಗಿ ಕಳೆದ ವಾರ ನಡೆದ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಿಂದ ಹೊರಗುಳಿದಿದ್ದ 31ರ ರಜಾಕ್ ಪೂರ್ಣ ಗುಣಮುಖರಾಗಿದ್ದು, ಮಾರ್ಚ್ 16ರಿಂದ ಆರಂಭವಾಗಲಿರುವ ವಿಶ್ವಕಪ್ ಟಿ-20 ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.
ಈ ಮಧ್ಯೆ ಚಿತ್ತಗಾಂಗ್ನಲ್ಲಿ ಕಳೆದ ಶುಕ್ರವಾರ ನಡೆದ ಟಿ-20 ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದ ಶಬ್ಬೀರಿ ಕೂಡ ಆಯ್ಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವಕಪ್ನಲ್ಲಿ ಪಾಲ್ಗೊಳ್ಳಲಿರುವ 15 ಸದಸ್ಯರ ಬಾಂಗ್ಲಾದೇಶ ತಂಡವನ್ನು ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮುಷ್ಫೀಕರ್ ರಹೀಂ ಮುನ್ನಡೆಸಲಿದ್ದಾರೆ.
ಢಾಕಾದಲ್ಲಿ ಮಾ.16ರಂದು ನಡೆಯಲಿರುವ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸುವ ಮೂಲಕ ಬಾಂಗ್ಲಾದೇಶ ಆಟಗಾರರು ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದ್ದಾರೆ.
ಬಾಂಗ್ಲಾದೇಶ ತಂಡ: ಮುಷ್ಫೀಕರ್ ರಹೀಂ (ನಾಯಕ), ತಮೀಮ್ ಇಕ್ಬಾಲ್, ಅನಾಮುಲ್ ಹಕ್, ಶಮ್ಶೂರ್ ರಹಮಾನ್, ಶಕೀಬ್-ಅಲ್-ಹಸನ್, ಮೊಮಿನುಲ್ ಹಕ್, ನಾಸಿರ್ ಹುಸೇನ್, ಶಬ್ಬೀರ್ ರೆಹಮಾನ್, ಮೊಹಮ್ಮದ್ ಮಹಮುದುಲ್ಲಾ, ಅಬ್ದುರ್ ರಜಾಕ್, ಸೋಹಾಗ್ ಗಾಜಿ, ಮಶ್ರಫೆ ಮೊರ್ತಜಾ, ಫಹ್ರಾದ್ ರೇಜಾ, ರುಬೆಲ್ ಹುಸೇನ್, ಅಲ್-ಅಮೀನ್ ಹುಸೇನ್.