ಏಷ್ಯಾ ಕಪ್ಗೆ ಧೋನಿ ಅಲಭ್ಯ
ಗಾಯದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಏಷ್ಯಾ ಕಪ್ನಲ್ಲಿ ಭಾರತ ತಂಡಕ್ಕೆ ಅಲಭ್ಯರಾಗಿದ್ದಾರೆ...
ನವದೆಹಲಿ: ಗಾಯದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಏಷ್ಯಾ ಕಪ್ನಲ್ಲಿ ಭಾರತ ತಂಡಕ್ಕೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ತಂಡದ ಉಪನಾಯಕ ಮತ್ತು ಯುವ ಆಟಗಾರ ವಿರಾಟ್ ಕೊಹ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಧೋನಿ ಅವರ ಸ್ಥಾನವನ್ನು ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರು ತುಂಬಲಿದ್ದಾರೆ. ಧೋನಿ ಪಕ್ಕೆ ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಸಂದರ್ಭ ಧೋನಿ ಅವರ ಎಡಪಕ್ಕೆ ನೋವಿನಿಂದ ಬಳಲುತ್ತಿದ್ದಾರಂತೆ. ಹೀಗಾಗಿ ಅವರು 10 ದಿನಗಳ ಕಾಲ ಅವರು ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಲಿದ್ದಾರೆ.
ಆದರೆ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಹೀನಾಯ ಸೋಲನುಭವಿಸಿದ ಹಿನ್ನೆಲೆಯಲ್ಲಿ, ನಾಯಕ ಧೋನಿ ಅವರ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದಿದ್ದವು. ಆದರೆ, ಪ್ರತಿಯೊಂದು ವಿದೇಶಿ ಸರಣಿಗಳಲ್ಲಿ ಆಕರ್ಷಕ ಬ್ಯಾಟಿಂಗ್ ಮಾಡಿ ಮಿಂಚಿರುವ ವಿರಾಟ್ ಕೊಹ್ಲಿ ಅವರು ಈಗ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ.
ಏಷ್ಯಾಕಪ್ನಲ್ಲಿ ಭಾರತ ಫೆಬ್ರವರಿ 26ರಂದು ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ವಿರುದ್ಧ ಸೆಣಸಲಿದೆ. ತವರಿಗೆ ಮರಳಿದ ಟೀಂ ಇಂಡಿಯಾ: ನಿರಂತರ ವೈಫಲ್ಯಗಳೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಸೋಲನುಭವಿಸಿದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ಬುಧವಾರ ತಡರಾತ್ರಿ ತವರಿಗೆ ಮರಳಿದೆ.
ತಂಡ ಮುಂಬೈಗೆ ಬಂದಿಳಿದ ತಕ್ಷಣ, ಎಲ್ಲ ಆಟಗಾರರು ತಮ್ಮ ತಮ್ಮ ನಗರಗಳಿಗೆ ತೆರಳುವ ವಿಮಾನಗಳನ್ನು ಏರಿ ಹೊರಟು ಹೋದರು. ಪ್ರವಾಸದಲ್ಲಿ ಮೊದಲ 5 ಪಂದ್ಯಗಳ ಏಕದಿನ ಸರಣಿಯಲ್ಲಿ ತನಗಿಂತ ಕಡಿಮೆ ರ್ಯಾಂಕಿಂಗ್ ಹೊಂದಿರುವ ನ್ಯೂಜಿಲೆಂಡ್ ವಿರುದ್ಧ 0-4 ಅಂತರದಿಂದ ಸೋಲನುಭವಿಸಿದ್ದ ಭಾರತ ತಂಡ, ನಂತರ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಅಂತರದಿಂದ ಕೈಚೆಲ್ಲಿತ್ತು.
ಈಗ ಸದ್ಯಕ್ಕೆ ವಿಶ್ರಾಂತಿ ಪಡೆಯಲಿರುವ ಭಾರತ ತಂಡ, ಏಷ್ಯಾ ಕಪ್ನಲ್ಲಿ ಭಾಗವಹಿಸಲು ಫೆಬ್ರವರಿ 23ರಂದು ಬಾಂಗ್ಲಾದೇಶಕ್ಕೆ ತೆರಳಲಿದೆ.