ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜೈಲಲ್ಲಿ ಕೈದಿಗಳಿಗೆ ರ್ಯಾಪಿಡ್ ಚದುರಂಗ ಕೂಟ

Mainashree
Updated On : 21 Feb 2014, 10:52 am

ಮಂಗಳೂರು: ಹಿಂಸೆ, ಅಪರಾಧಗಳಿಂದ ಮನಸ್ಸು ಮುಕ್ತವಾಗಲು, ಮೆದುಳಿನಲ್ಲಿ ಸೃಜನಶೀಲ ವಿಚಾರ ತುಂಬಲು ಕಾರಾಗೃಹದಲ್ಲಿರುವ ಕೈದಿಗಳಿಗೆ ರ್ಯಾಪಿಡ್ ಚೆಸ್ ಪಂದ್ಯ ಆಯೋಜಿಸಲಾಗಿದೆ. ಜೈಲಿನಲ್ಲಿ ಚೆಸ್ ಆಸಕ್ತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರಕ್ಕೆ ಎರಡು ದಿನ ಚೆಸ್ ತರಬೇತಿ ನೀಡಲು ಚೆಸ್ ಅಸೋಸಿಯೇಶನ್ ಮುಂದಾಗಿದೆ.
ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಮತ್ತು ಇಶ್ಯೂಸ್ ಆ್ಯಂಡ್ ಕನ್ಸರ್ನ್ ಮ್ಯಾಗಝಿನ್ ಪಂದ್ಯ ಕೂಟ ಆಯೋಜಿಸಿದೆ. “ಜೈಲ್ ಅಧೀಕ್ಷಕ ರಮೇಶ್ ಪಿ.ಎಸ್. ಕೈದಿಗಳ ಮನಪರಿವರ್ತನೆ ಮಾಡುವ ನಿಟ್ಟಿನಲ್ಲಿ ಚೆಸ್ ಕೂಟ ಆಯೋಜಿಸಬಹುದೇ ಎಂದು ನಮ್ಮ ಬಳಿ ಕೇಳಿದರು. ನಾವು ಸಂತೋಷದಿಂದ ಸಮ್ಮತಿ ನೀಡಿದವು ಎಂದು ಚೆಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಗುರುರಾಜ್ ಹೇಳುತ್ತಾರೆ.
ಈಗಾಗಲೇ 8 ಚೆಸ್ ಬೋರ್ಡ್ ಉಚಿತವಾಗಿ ನೀಡಿದ್ದೇವೆ, ಇನ್ನೂ 7 ಬೋರ್ಡ್‌ಗಳನ್ನು ಪಂದ್ಯದ ದಿನದಂದು ವಿತರಿಸುತ್ತೇವೆ. ಫೆ.23ರಂದು ಬೆಳಗ್ಗೆ 10 ಗಂಟೆಗೆ ಚೆಸ್ ಪಂದ್ಯ ಆರಂಭಗೊಳ್ಳಲಿದೆ. ಕೈದಿಗಳು ಇಚ್ಛಿಸಿದರೆ ಚೆಸ್ ಉಚಿತ ತರಬೇತಿ ನೀಡುತ್ತೇವೆ ಎನ್ನುತ್ತಾರೆ ಗುರುರಾಜ್.
ಕ್ರೀಡಾಂಗಣ ಇಲ್ಲ, ಚದುರಂಗವೇ ಗತಿ: ಇತ್ತೀಚೆಗೆ ಹೊಸದಾಗಿ ನಿರ್ಮಿಸಿದ ಜೈಲ್‌ಗೆ ಕೈದಿಗಳನ್ನು ವರ್ಗಾಯಿಸಲಾಗಿದೆ. ಹಳೆಯ ಜೈಲ್ ಒಳಭಾಗದಲ್ಲಿ ವಾಲಿಬಾಲ್ ಇನ್ನಿತರ ಹೊರಾಂಗಣ ಕ್ರೀಡೆ ಆಡುವ ಅವಕಾಶ ಇತ್ತು. ಆದರೆ, ಹೊಸ ಜೈಲ್‌ಗೆ ಬಂದ ಮೇಲೆ ಇದೆಲ್ಲ ನಿಂತು ಹೋಗಿದೆ.
ಕಾರಣ ಹೊಸ ಜೈಲ್ ಕಾಮಗಾರಿಯು ಶೇ.40ರಷ್ಟು ಮಾತ್ರ ಮುಗಿದಿದೆ. ಒಳಗೆ ಕ್ರೀಡಾಂಗಣ ರಚನೆಯಾಗಿಲ್ಲ. ಆದ್ದರಿಂದ ಸಮಯ ಕಳೆಯಲು ಕೈದಿಗಳು ಚೆಸ್ ಅವಲಂಬಿಸಿದ್ದಾರೆ. ಚೆಸ್ ಕಲಿತವರು ಜೈಲು ಸೇರಿ, ಉಳಿದವರಿಗೂ ಕಲಿಸಿದ್ದಾರೆ. ಹೀಗಾಗಿ ಜೈಲ್ ಒಳಗೆ ಚೆಸ್ ಪಟುಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಜೈಲ್ ಅಧೀಕ್ಷಕರು ಕೈದಿಗಳ ಈ ಆಟಕ್ಕೆ ಉತ್ತೇಜನ ನೀಡಿದ್ದಾರೆ. 'ಕೇರಂ, ಟಿವಿ ನೋಡುವುದಕ್ಕಿಂತ ಚೆಸ್ ಒಳ್ಳೆ ಟೈಮ್ ಪಾಸ್. ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಕೆಟ್ಟ ವಿಚಾರ ಮರೆತು ಹೋಗಿ ಮೆದುಳಿಗೆ ಒಳ್ಳೆ ವ್ಯಾಯಾಮ ನೀಡುತ್ತದೆ. ಗುರುವಾರ ಚೆಸ್ ಕೋಚ್ ಕೌಶಿಕ್ ಜೈಲ್‌ಗೆ ಹೋಗಿ ಕಿರು ತರಬೇತಿ ನೀಡಿದ್ದಾರೆ. ಬಯಸಿದರೆ ವಾರಕ್ಕೆ ಎರಡು ಬಾರಿ ತರಬೇತಿ ನೀಡಬಹುದು' ಎಂದು ಗುರುರಾಜ್ ಹೇಳುತ್ತಾರೆ. 'ಚೆಸ್ ಅಟಗಾರರ ಸಂಖ್ಯೆ ಜೈಲ್‌ನಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಚೆಸ್ ಟೂರ್ನಿ ನಡೆಸಬೇಕು ಎಂಬ ಮನವಿ ಕೈದಿಗಳಿಂದ ಬಂತು. ಚೆಸ್ ಅಸೋಸಿಯೇಶನ್ ಮತ್ತು ಸುರತ್ಕಲ್ ಇಶ್ಯುಸ್ ಆ್ಯಂಡ್ ಕನ್ಸರ್ನ್ ಮ್ಯಾಗಝೀನ್ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡುತ್ತಿದೆ' ಎಂದು ಜೈಲ್ ಅಧೀಕ್ಷಕ ರಮೇಶ್ ಪಿ.ಎಸ್. ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಟ್ರೋಫಿ, ನಗದು ಬಹುಮಾನ: ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ 3 ಸಾವಿರ, 2 ಸಾವಿರ 1 ಸಾವಿರ. ಗೆದ್ದವರಿಗೆ ಚೆಸ್‌ನ ಆನೆ (ಪಾನ್) ಪ್ರತಿಕೃತಿಯ ಟ್ರೋಫಿ ನೀಡಲಾಗುವುದು. ಕೈದಿಗಳು ಬಿಡುಗಡೆಯಾದ ತಕ್ಷಣ ಟ್ರೋಫಿ ಅವರ ಕೈಗೆ ಕೊಡುತ್ತೇವೆ. ಅಲ್ಲಿಯವರೆಗೆ ನಮ್ಮ ಕಚೇರಿಯಲ್ಲಿ ಇಡಲಾಗುವುದು. ಎಲ್ಲ ಕೈದಿಗಳ ಹಣಕಾಸು ಖಾತೆ ಜೈಲ್‌ನಲ್ಲಿ ತೆರೆಯಲಾಗಿದೆ. ಬಹುಮಾನ ಹಣವನ್ನು ಖಾತೆಗೆ ಹಾಕುತ್ತೇವೆ ಎಂದು ಅಧೀಕ್ಷರು ಹೇಳುತ್ತಾರೆ.
ಟಿಶರ್ಟ್, ಕ್ಯಾಪ್ ಉಚಿತ
ಜೈಲ್ ಒಳಗೆ ಕೈದಿಗಳು ಯಾವುದೇ ಡ್ರೆಸ್ ಹಾಕಬಹುದು. ಆದರೆ ಪಂದ್ಯದ ದಿನ ಚೆಸ್ ಆಡುವವರಿಗೆ ಟಿಶರ್ಟ್ ಮತ್ತು ಕ್ಯಾಪ್ ಉಚಿತವಾಗಿ ನೀಡಲಾಗುತ್ತದೆ. ಜೈಲ್‌ನಲ್ಲಿ ಸಭಾಂಗಣ, ಕ್ರೀಡಾಂಗಣ ಇಲ್ಲ. ಹೀಗಾಗಿ ಜೈಲ್ ಆವರಣ ಗೋಡೆ ಒಳಗಿರುವ ಖಾಲಿ ಜಾಗದಲ್ಲಿಯೇ ಟೆಸ್ ಕೂಟ ನಡೆಯಲಿದೆ.


ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement