ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡಂಕನ್ ಫ್ಲೆಚರ್‌ಗೆ ಪ್ರಹಾರ, ಫ್ಲವರ್‌ಗೆ ಹಾರ?

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಪ್ರವಾಸಗಳಲ್ಲಿ ಟೀಂ ಇಂಡಿಯಾ ಹೀನಾಯ ಸೋಲುಂಡಿರುವ ಹಿನ್ನೆಲೆಯಲ್ಲಿ, ತಂಡದ...

Mainashree
Updated On : 21 Feb 2014, 11:10 am

ಮುಂಬೈ: ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಪ್ರವಾಸಗಳಲ್ಲಿ ಟೀಂ ಇಂಡಿಯಾ ಹೀನಾಯ ಸೋಲುಂಡಿರುವ ಹಿನ್ನೆಲೆಯಲ್ಲಿ, ತಂಡದ ಕೋಚ್ ಡಂಕನ್ ಫ್ಲೆಚರ್ ಅವರನ್ನು ತೆಗೆದು ಹಾಕಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ.
ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ, ಬಿಸಿಸಿಐ ಈಗಾಗಲೇ ಫ್ಲೆಚರ್ ಅವರ ದೇಶದವರೇ ಆದ ಮತ್ತು ಇಂಗ್ಲೆಂಡ್ ತಂಡದ ಮಾಜಿ ನಿರ್ದೇಶಕ ಆ್ಯಂಡಿ ಫ್ಲವರ್ ಅವರನ್ನು ಕೋಚ್ ಸ್ಥಾನಕ್ಕೆ ಸಂಪರ್ಕಿಸಿದೆ ಎನ್ನಲಾಗಿದೆ.
ಆದರೆ, ಇದುವರೆಗೂ ಯಾವುದೇ ಮಾತುಕತೆಗಳು ಅಂತಿಮಗೊಂಡಿಲ್ಲ. ಇನ್ನೂ ಪ್ರಾಥಮಿಕ ಹಂತದಲ್ಲೇ ಇವೆ. ಮಾರ್ಚ್ ತಿಂಗಳಲ್ಲಿ ಡಂಕನ್ ಫ್ಲೆಚರ್ ಅವಧಿ ಮುಕ್ತಾಯಗೊಳ್ಳುವುದರಿಂದ, ಭಾರತ ತಂಡದ ಕೋಚ್ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲು ಬರುವ ತಿಂಗಳು ಬಿಸಿಸಿಐ ಅರ್ಜಿ ಕರೆಯುವ ಸಾಧ್ಯತೆಗಳಿವೆ.
ಹೊಸ ಕೋಚ್ ಆಯ್ಕೆ ಮಾಡುವಾಗ ಆಗತ್ಯ ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ. ಆದರೆ, ಇದುವರೆಗೂ ಫ್ಲವರ್ ಅವರು ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂದೇನಾಗಲಿದೆ ಎಂಬ ವಿಷಯಗಳು ಈಗ ಕೌತುಕ ಮೂಡಿಸಿದೆ.
2011ರ ನಂತರ ಭಾರತ ತಂಡದ ಕೋಚ್ ಆಗಿ ತಮ್ಮ ಒಪ್ಪಂದವನ್ನು ಮುಂದುವರಿಸಲು ಗ್ಯಾರಿ ಕರ್ಸ್ಟನ್ ನಿರಾಕರಿಸಿದ ಹಿನ್ನೆಲೆಯಲ್ಲಿ, ಫ್ಲೆಚರ್ ಅವರು ಭಾರತ ತಂಡದ ಕೋಚ್ ಆಗಿದ್ದರು. ಆದರೆ, ಜಿಂಬಾಬ್ವೆಯ ಫ್ಲೆಚರ್ ಅವರು ತಂಡದ ಕೋಚ್ ಆದ ನಂತರ, ಭಾರತ ವಿದೇಶದಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿದೆ.
ಆದರೆ, ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಹೀನಾಯ ಸೋಲನುಭವಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡಕ್ಕೆ ಫ್ಲವರ್ ಸಹ ರಾಜಿನಾಮೆ ನೀಡಿದ್ದರು.
ಫ್ಲವರ್ ಜತೆ ಮಾತುಕತೆ ನಿರಾಕರಿದ ಬಿಸಿಸಿಐ: ಭಾರತ ತಂಡದ ಕೋಚ್ ಹುದ್ದೆಗೆ ಆ್ಯಂಡಿ ಫ್ಲವರ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ ಎಂಬ ವರದಿಗಳನ್ನು ಬಿಸಿಸಿಐ ಶುಕ್ರವಾರ ನಿರಾಕರಿಸಿದೆ. 'ಇದೊಂದು ವದಂತಿ. ನಾನೇ ಬಿಸಿಸಿಐನ ಕಾರ್ಯದರ್ಶಿ ಮತ್ತು ಫ್ಲವರ್ ಅವರೊಂದಿಗೆ ಅಂತಹ ಮಾತುಕತೆಗಳು ನಡದೇ ಇಲ್ಲ' ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಅವರು ಪ್ರತಿಕ್ರಿಯಿಸಿದ್ದಾರೆ.
ಫ್ಲವರ್ ಜತೆ ಮಾತುಕತೆ ನಡೆಸಿರುವ ಕುರಿತು ಪತ್ರಿಕೆಗಳಿಗೆ, ಯಾವ ಕ್ರಿಕೆಟ್ ಮಂಡಳಿಯ ಮೂಲಗಳು ಮಾಹಿತಿ ನೀಡಿವೆ ಎಂಬುದನ್ನು ನಾನು ತಿಳಿಯಬಯಸುತ್ತೇನೆ ಎಂದಿದ್ದಾರೆ ಪಟೇಲ್.
ಧೋನಿ ಜತೆ ಪರಾಮರ್ಶೆ: ಬಾಂಗ್ಲಾದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟಿ20 ವಿಶ್ವಕಪ್ ನಂತರ ಎಲ್ಲ ಸಾಧ್ಯತೆಗಳ ಕುರಿತು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕೋಚ್ ಡಂಕನ್ ಫ್ಲೆಚರ್ ಅವರೊಂದಿಗೆ ಪರಾಮರ್ಶೆ ನಡೆಸುವುದಾಗಿ ಸಹ ಇದೇ ಸಂದರ್ಭದಲ್ಲಿ ಸಂಜಯ್ ಪಟೇಲ್ ತಿಳಿಸಿದರು. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲೂ ಭಾರತ ಹೀನಾಯವಾಗಿ ಸೋಲನುಭವಿಸಿರುವ ಕುರಿತು ಇಬ್ಬರೊಂದಿಗೆ ಬಿಸಿಸಿಐ ಮಾತುಕತೆ ನಡೆಸಲಿದೆಯಂತೆ.
'ಪ್ರತಿಯೊಂದು ಪಂದ್ಯಾವಳಿಯ ನಂತರ ನಾವು ನಾಯಕ ಮತ್ತು ಕೋಚ್ ಜತೆ ಮಾತುಕತೆ ನಡೆಸುವುದು ಬಿಸಿಸಿಐನ ಸಾಮಾನ್ಯ ಪ್ರಕ್ರಿಯೆ. ಈಗ ಟಿ20 ವಿಶ್ವಕಪ್ ನಂತರ ಇಂತಹ ಮಾತುಕತೆ ನಡೆಸಲಾಗುತ್ತದೆ' ಎಂದು ಪಟೇಲ್ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement