ನಾಳೆ ಮಂಗಳೂರಲ್ಲಿ ಹಾಫ್ ಮ್ಯಾರಥಾನ್
ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯ ಆಶ್ರಯ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಫೆ.23ರಂದು ರಾಷ್ಟ್ರಮಟ್ಟದ ಹಾಫ್ ಮ್ಯಾರಥಾನ್ ನಗರದಲ್ಲಿ ಏರ್ಪಡಲಿದೆ. ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಅರುಣ್ ರಾವ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಬೆಳಗ್ಗೆ 6.30ರಿಂದ ಮಂಗಳಾ ಕ್ರೀಡಾಂಗಣದಲ್ಲಿ ಮ್ಯಾರಥಾನ್ಗೆ ಚಾಲನೆ ನೀಡಲಾಗುವುದು. ಬೆಳಗ್ಗೆ 9ಕ್ಕೆ ಸಮಾರೋಪದಲ್ಲಿ ಬಹುಮಾನ ನೀಡಲಾಗುವುದು. ಹಿರಿಯರಿಗೆ 21 ಕಿ.ಮೀ ಮತ್ತು 10 ಕಿ.ಮೀ, ಕಾಲೇಜು ಹುಡುಗ ಮತ್ತು ಹುಡುಗಿಯರಿಗೆ 5 ಕಿ.ಮೀ, ಹೈಸ್ಕೂಲ್ ಬಾಲಕರಿಗೆ 5 ಕಿ.ಮೀ, ಬಾಲಕಿಯರಿಗೆ 3 ಕಿ.ಮೀ. ಮ್ಯಾರಥಾನ್ ಇರಲಿದೆ. ಇದಲ್ಲದೆ ಸಂಭ್ರಮದ ಓಟವೂ ನಡೆಯಲಿದೆ. ಏಳು ವಿಭಾಗದಲ್ಲಿ ಸ್ಪರ್ಧಿಸಿದ ವಿಜೇತರಿಗೆ 6.50 ಲಕ್ಷ ಮೌಲ್ಯದ ವಿವಿಧ ಬಹುಮಾನ ನೀಡಲಾಗುವುದು. ಸ್ಪರ್ಧಿಗಳಿಗೆ ಚಿಪ್ ಅಳವಡಿಸಲಿದ್ದು, ಮ್ಯಾರಥಾನ್ನಲ್ಲಿ ಎಷ್ಟು ಹೊತ್ತಿನಲ್ಲಿ ಗುರಿ ತಲುಪಲಾಗಿದೆ ಎಂಬ ಮಾಹಿತಿಯನ್ನು ಇದು ಒಳಗೊಳ್ಳಲಿದೆ. ವಿವಿಧ ರಾಜ್ಯಗಳಿಂದ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ.