ಏಷ್ಯಾ ಕಪ್: ಬಾಂಗ್ಲಾಗೆ ತೆರಳಿದ ವಿರಾಟ್ ಪಡೆ
ಮುಂಬೈ: ಟೀಂ ಇಂಡಿಯಾ ಆಟಗಾರರು ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾನುವಾರ ಬಾಂಗ್ಲಾದೇಶಕ್ಕೆ ತೆರಳಿದರು.
ಕಾಯಂ ನಾಯಕ ಮಹೇಂದ್ರ ಸಿಂಗ್ ಧೋನಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಂದನೇ ಸ್ತರದ ಎಡ ಸ್ನಾಯುಸೆಳೆತಕ್ಕೆ ಒಳಗಾಗಿರುವ ಕಾರಣ ಈ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಹಾಗಾಗಿ, ಅವರ ಬದಲಿಗೆ ವಿರಾಟ್ ಕೊಹ್ಲಿಗೆ ನಾಯಕತ್ವದ ಜವಾಬ್ದಾರಿ ವಹಿಸಲಿದ್ದು, ಫೆಬ್ರವರಿ 25ರಿಂದ ಟೂರ್ನಿ ಆರಂಭವಾಗಲಿದೆ.
ಭಾರತ ತಂಡ 2010ನೇ ಸಾಲಿನಲ್ಲಿ ಶ್ರೀಲಂಕಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಒಟ್ಟಾರೆ ಐದನೇ ಬಾರಿಗೆ ಹಾಗೂ ತನ್ನ ಕೊನೆಯ ಏಷ್ಯಾಕಪ್ ಗೆದ್ದುಕೊಂಡಿತ್ತು.
ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಗೆದ್ದುಕೊಳ್ಳುವ ಉತ್ಸಾಹದಲ್ಲಿರುವ ಭಾರತೀಯ ಪಡೆ, ಫೆಬ್ರವರಿ 26ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.
ಉಳಿದಂತೆ ಭಾರತ ಫೆಬ್ರವರಿ 28ರಂದು ಶ್ರೀಲಂಕಾ, ಮಾರ್ಚ್ 2ರಂದು ಹಾಲಿ ಚಾಂಪಿಯನ್ ಪಾಕಿಸ್ತಾನ ಹಾಗೂ ಮಾ. 5ರಂದು ಅಫ್ಘಾನಿಸ್ತಾನ ತಂಡದ ವಿರುದ್ಧ ಸೆಣಸಲಿದೆ. ಮಾ. 8ರಂದು ಫೈನಲ್ ಪಂದ್ಯ ನಡೆಯಲಿದೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಭುವನೇಶ್ವರ ಕುಮಾರ್, ಮೊಹಮ್ಮದ್ ಶಮಿ, ವರುಣ್ ಏರಾನ್, ಸ್ಟುವರ್ಟ್ ಬಿನ್ನಿ, ಅಮಿತ್ ಮಿಶ್ರಾ ಮತ್ತು ಈಶ್ವರ್ ಪಾಂಡೆ.