ಸೆಮಿಫೈನಲ್‌ಗೆ ಆಸ್ಟ್ರೇಲಿಯಾ
ಉತ್ತಮ ಸಾಂಘಿಕ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಹುಡುಗರು 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ...
ದುಬೈ: ಉತ್ತಮ ಸಾಂಘಿಕ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಹುಡುಗರು 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 5 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು.
ವೆಸ್ಟ್ ಇಂಡೀಸ್ ನೀಡಿದ್ದ 209 ರನ್‌ಗಳ ಗುರಿ ಬೆಂಬತ್ತಿದ ಆಸ್ಟ್ರೇಲಿಯನ್ನರು ಇನ್ನೂ 20 ಎಸೆತಗಳು ಉಳಿದಿರುವಂತೆಯೋ ರೋಚಕ ಜಯ ಸಂಪಾದಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜಾರನ್ ಮೋರ್ಗನ್ (55) ಮತ್ತು ಮ್ಯಾಥ್ಯೂ ಶಾರ್ಟ್ (52) ಅರ್ಧಶತಕ ಗಳಿಸಿ ಆಸ್ಟ್ರೇಲಿಯಾಕ್ಕೆ ಜಯದ ಕೇಕೆ ಹಾಕಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 49.5 ಓವರುಗಳಲ್ಲಿ 208 ರನ್‌ಗಳಿಸಿತು. ಮಧ್ಯಮ ಕ್ರಮಾಂಕದ ದಾಂಡಿಗ ನಿಕೋಲಸ್ ಪೂರನ್ (143ರನ್, 160 ಎಸೆತ, 14 ಬೌಂಡರಿ, 6 ಸಿಕ್ಸರ್) ಶತಕ ಬಾರಿಸಿದರು. ಆದರೆ, ಇತರೆ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳ ವೈಫಲ್ಯದಿಂದಾಗಿ ಅವರ ಶತಕ ವ್ಯರ್ಥವಾದಂತಾಯಿತು.
ಸೆಮಿಫೈನಲ್‌ಗೆ ದಕ್ಷಿಣ ಆಫ್ರಿಕಾ:
ಇಂದೇ ನಡೆದ ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‌ಗಳಿಂದ ಆಫ್ಘಾನಿಸ್ತಾನ ತಂಡವನ್ನು ಸೋಲಿಸಿ ಸುಲಭವಾಗಿ ನಾಲ್ಕರಘಟ್ಟ ಪ್ರವೇಶಿಸಿತು.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ 49.5 ಓವರುಗಳಲ್ಲಿ 197 ರನ್‌ಗಳ ಸಾಧಾರಣ ಮೊತ್ತಕ್ಕೆ ಪತನಗೊಂಡಿತು. ಮಧ್ಯಮ ಕ್ರಮಾಂಕದ ಆಟಗಾರನಾಯಕ ನಾಸೀರ್ ಅಹ್ಮಜಾಯಿ 95 ಎಸೆತಗಳಲ್ಲಿ 4 ಬೌಂಡರಿಗಳಿದ್ದ 61 ರನ್‌ಗಳಿಸಿದ್ದು ತಂಡದ ಪರ ವೈಯಕ್ತಿಕ ಉತ್ತಮ ಸಾಧನೆಯಾಯಿತು.ದಕ್ಷಿಣ ಆಫ್ರಿಕಾ ಪರ ಜಸ್ಟಿಲ್ ಡಿಲ್ 40 ರನ್‌ಗಳಿಗೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಉತ್ತರವಾಗಿ ದಕ್ಷಿಣ ಆಫ್ರಿಕಾ 39.2 ಓವರುಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 198 ರನ್‌ಗಳಿಸಿ ಸುಲಭವಾಗಿ ಗೆಲವಿನ ನಗೆ ಬೀರಿತು.
ಆರಂಭಿಕ ಏಡೆನ್ ಮಾರ್ಕ್‌ರಮ್ ಅಜೇಯ ಶತಕ ಬಾರಿಸಿ (105ರನ್, 118 ಎಸೆತ, 9 ಬೌಂಡರಿ) ದಕ್ಷಿಣ ಆಫ್ರಿಕಾದ ನಿರಾಯಾಸ ಗೆಲವಿಗೆ ಕಾರಣರಾದರು.
ಸಂಕ್ಷಿಪ್ತ ಸ್ಕೋರ್:
ವೆಸ್ಟ್ ಇಂಡೀಸ್ 49.5 ಓವರುಗಳಲ್ಲಿ 208 (ನಿಕೋಲಸ್ ಪೂರನ್ 143, ಗೈ ವಾಲ್ಕರ್ 44ಕ್ಕೆ3) ಹಾಗೂ ಆಸ್ಟ್ರೇಲಿಯಾ 46.4 ಓವರುಗಳಲ್ಲಿ 5 ವಿಕೆಟ್‌ಗೆ 209 (ಜಾರನ್ ಮೋರ್ಗನ್ 55, ಮ್ಯಾಥ್ಯೂ ಶಾರ್ಟ್ 52, ರೇ ಜೋರ್ಡಾನ್ 34ಕ್ಕೆ2).
ಆಫ್ಘಾನಿಸ್ತಾನ 49.5 ಓವರುಗಳಲ್ಲಿ 197 (ನಾಸೀರ್ ಅಹ್ಮಜಾಯಿ 61, ಉಸ್ಮಾನ್ ಘನಿ 36, ಜಸ್ಟಿಲ್ ಡಿಲ್ 40ಕ್ಕೆ4) ಹಾಗೂ ದಕ್ಷಿಣ ಆಫ್ರಿಕಾ 39.2 ಓವರುಗಳಲ್ಲಿ 1 ವಿಕೆಟ್‌ಗೆ 198 (ಏಡೆನ್ ಮಾರ್ಕ್‌ರಮ್ ಅಜೇಯ 105, ಕಿರ್ವಿನ್ ಕ್ರಿಸ್ಟೋಫೆಲ್ಸ್ ಅ. 56).