ಸೋಮ್ದೇವ್ ಮುಡಿಗೇರಿದ ಗರಿ
ನವದೆಹಲಿ: ಭಾರತದ ಸೋಮ್ದೇವ್ ದೇವ್ವರ್ಮನ್ 2014ರ ದೆಹಲಿ ಓಪನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ದೆಹಲಿ ಟೆನಿಸ್ ಸಂಕೀರ್ಣದಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸೋಮ್ದೇವ್, 6-3, 6-1 ನೇರ ಸೆಟ್ಗಳಿಂದ ಕಜಕಿಸ್ತಾನದ ಅಲೆಕ್ಸಾಂಡರ್ ನೆಡೊಯೆಸೋವ್ ವಿರುದ್ಧ ಜಯಗಳಿಸಿ ಈ ಸಾಧನೆ ಮಾಡಿದರು.
ಟೂರ್ನಿಯ ಅಗ್ರಶ್ರೇಯಾಂಕಿತ ಆಟಗಾರರಾಗಿದ್ದ ಅಲೆಕ್ಸಾಂಡರ್ ಪಂದ್ಯದಲ್ಲಿ ಸಾಕಷ್ಟು ಅನಗತ್ಯ ತಪ್ಪುಗಳನ್ನು ಮಾಡಿ ಕೈಸುಟ್ಟುಕೊಂಡರು. ಆದರೆ, ತವರು ಅಂಕಣದ ಬಗ್ಗೆ ಚೆನ್ನಾಗಿ ಪರಿಚಯವಿದ್ದ ಎರಡನೇ ಶ್ರೇಯಾಂಕಿತ ಸೋಮ್ದೇವ್ ಮಾತ್ರ ಆಟದ ಎಲ್ಲ ವಿಭಾಗಗಳಲ್ಲೂ ಗುಣಮಟ್ಟದ ಪ್ರದರ್ಶನ ನೀಡುವುದರೊಂದಿಗೆ ಪ್ರಶಸ್ತಿಯ ಮೇಲೆ ತಮ್ಮ ಮೊಹರು ಒತ್ತಿದರು.
ಕೇವಲ 59 ನಿಮಿಷಗಳ ಆಟದಲ್ಲಿಯೇ ಎದುರಾಳಿಗೆ ಸೋಲುಣಿಸುವಲ್ಲಿ ಯಶಸ್ವಿಯಾದ ಸೋಮ್ದೇವ್ ಜೀವನದ ಮೂರನೇ ಎಟಿಪಿ ಚಾಲೆಂಜರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಮೊದಲ ಸೆಟ್ನಲ್ಲಿ ಎದುರಾಳಿಗೆ ಒಂದೂ ಬ್ರೇಕ್ ಪಾಯಿಂಟ್ ಗೆದ್ದುಕೊಳ್ಳಲು ಅವಕಾಶ ನೀಡದ ಸೋಮ್ದೇವ್ ಎರಡನೇ ಸೆಟ್ನಲ್ಲಿ ಸಹ ಉತ್ತಮ ಆಟ ಮುಂದುವರಿಸಿ ಮೂರು ಬ್ರೇಕ್ ಪಾಯಿಂಟ್ಗಳನ್ನು ಉಳಿಸಿಕೊಂಡಿದ್ದಲ್ಲದೆ ನಾಲ್ಕರ ಪೈಕಿ ಎರಡರಲ್ಲಿ ಅಂಕಗಳನ್ನಾಗಿಯೂ ಪರಿವರ್ತಿಸುವ ಮೂಲಕ ಪಂದ್ಯದ ಮೇಲೆ ಛಾಪು ಮೂಡಿಸಿದರು.
ಈ ಜಯಭೇರಿಯೊಂದಿಗೆ ಭಾರತೀಯ ಆಟಗಾರ ಟ್ರೋಫಿಯೊಂದಿಗೆ 90 ಅಂಕಗಳನ್ನೂ ಜೇಬಿಗಿಳಿಸಿಕೊಂಡರು. ಇದಕ್ಕೂ ಮುನ್ನ ಶನಿವಾರ ಸಾಕೇತ್ ಮೈನೇನಿ ಮತ್ತು ಸನಮ್ ಸಿಂಗ್ ಪುರುಷರ ಡಬಲ್ಸ್ನಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಭಾರತದ ಕೀರ್ತಿ ಮೆರೆಸಿದ್ದರು.