ಹರಿಣಗಳಿಗೆ ಜಯ
ಪೋರ್ಟ್ ಎಲಿಜಬೆತ್: ಡೇಲ್ ಸ್ಟೇಯ್ನ್ ಅವರ ಆಕರ್ಷಕ ಬೌಲಿಂಗ್ ನೆರವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ 231 ರನ್ಗಳ ಭಾರೀ ಅಂತರದಿಂದ ಜಯ ಸಾಧಿಸಿತು. ದ್ವಿತೀಯ ಇನಿಂಗ್ಸ್ನಲ್ಲಿ 448 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ 73.4 ಓವರ್ಗಳಲ್ಲಿ 216 ರನ್ ಗಳಿಸುವಷ್ಟರಲ್ಲೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.
ಇದರೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸಮಬಲ ಸಾಧಿಸಿವೆ. ಹೀಗಾಗಿ ಈಗ ಮಾರ್ಚ್ 1ರಿಂದ ಕೇಪ್ ಟೌನ್ನಲ್ಲಿ ಆರಂಭವಾಗಲಿರುವ 3ನೇ ಟೆಸ್ಟ್ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ.
ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾದ ಡೇಲ್ ಸ್ಟೇಯ್ನ್ 20 ಓವರ್ಗಳ ಬೌಲಿಂಗ್ ಪ್ರದರ್ಶಿಸಿ, 55 ರನ್ ನೀಡಿ 4 ವಿಕೆಟ್ ಕಬಳಿಸಿದರು. ಫಿಲ್ಯಾಂಡರ್ 2 ವಿಕೆಟ್ ಪಡೆದರೆ, ಮಾರ್ನ್ ಮಾರ್ಕೆಲ್, ಡುಮಿನಿ ಹಾಗೂ ಡಿ.ಎಲ್ಗಾರ್ ತಲಾ 1 ವಿಕೆಟ್ ಪಡೆದರು.
ಇನ್ನು ಆರಂಭಿಕರಾದ ಕ್ರಿಸ್ ರೋಜರ್ (107) ಶತಕ ಮತ್ತು ಡೇವಿಡ್ ವಾರ್ನರ್ (66) ಅರ್ಧ ಶತಕ ಮಾತ್ರ ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಇಬ್ಬರನ್ನು ಹೊರತುಪಡಿಸಿದರೆ, ಇನ್ನುಳಿದ ಯಾವುದೇ ಬ್ಯಾಟ್ಸ್ಮನ್ ಎರಡಂಕಿ ದಾಟಲಿಲ್ಲ. ಹೀಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ 281 ರನ್ಗಳ ಅಂತರದಿಂದ ಜಯ ಸಾಧಿಸಿದ್ದ ಆಸ್ಟ್ರೇಲಿಯಾ, ದ್ವಿತೀಯ ಇನಿಂಗ್ಸ್ನಲ್ಲಿ ಹೀನಾಯವಾಗಿ ಸೋಲುವಂತಾಯಿತು.
ಇದಕ್ಕೂ ಮುನ್ನ, ಶನಿವಾರ ದಿನಾಂತ್ಯಕ್ಕೆ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ಗೆ 192 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ, ಭಾನುವಾರ ದಿನದ ಆಟ ಮುಂದುವರಿಸಿ 5 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಹರಿಣಗಳ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಹಶೀಂ ಆಮ್ಲಾ (ಅಜೇಯ 127) ಅವರು ತಾವು ಮತ್ತೆ ಫಾರ್ಮ್ಗೆ ಮರಳಿರುವುದನ್ನು ಸಾಬೀತುಪಡಿಸಿದರು.
4ನೇ ದಿನದ ಆಟ ಮುಕ್ತಾಯಗೊಂಡಾಗ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆ ಹಾಕಿ ಸಂಪೂರ್ಣವಾಗಿ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಇಂತಹ ಸ್ಥಿತಿಯಲ್ಲೇ ಪಂದ್ಯದ ಅವಧಿಯನ್ನು ಗಂಟೆ ಹೆಚ್ಚಿಸಲಾಯಿತು. ದಕ್ಷಿಣ ಆಫ್ರಿಕಾಕ್ಕೆ ಜಯ ಸಾಧಿಸಲು ಅಷ್ಟು ಅವಕಾಶ ಸಾಕಾಯಿತು. ಅವಕಾಶ ಬಳಿಸಿಕೊಂಡ ಹರಿಣಗಳು ಕಾಂಗೂರಗಳನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾದ ಜೀನ್ ಪಾಲ್ ಡುಮಿನಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 423
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 246
ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ 270/5 ಡಿಕ್ಲೇರ್
ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ 216
ರೋಜರ್ 107, ವಾರ್ನರ್ 66
ಸ್ಟೇಯ್ನ್ 55ಕ್ಕೆ 4, ಫಿಲ್ಯಾಂಡರ್ 39ಕ್ಕೆ 2