ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಉಪಖಂಡದ ಆಧಿಪತ್ಯಕ್ಕೆ ಸಮರ ಶುರು

ರಿಕೆಟ್ ಅನ್ನು ತಮ್ಮ ಉಸಿರಂತೆ ಆರಾಧಿಸುವ ಖಂಡದಲ್ಲಿ ಅತಿಪತ್ಯ ಸಾಧಿಸಲು ಏಷ್ಯಾ ರಾಷ್ಟ್ರಗಳ ನಡುವಣ ರೋಚಕ ಕದನವಾದ ಏಷ್ಯಾಕಪ್ ...

Rashmi Kasaragodu
Updated On : 25 Feb 2014, 1:32 am

1983ರಲ್ಲಿ ಏಷ್ಯಾ ರಾಷ್ಟ್ರಗಳಲ್ಲಿ ಕ್ರಿಕೆಟ್ ಅನ್ನು ಬೆಳೆಸುವ ಉದ್ದೇಶದೊಂದಿಗೆ ಏಷ್ಯಾ ಕ್ರಿಕೆಟ್ ಸಮಿತಿಯನ್ನು ಸ್ಥಾಪಿಸಲಾಯಿತು. ಆಗ ಈ ಪಂದ್ಯಾವಳಿಯನ್ನು ಮೊದಲ ಭಾರಿಗೆ ನಡೆಸಲಾಯಿತು. ನಂತರ ಪ್ರತಿ ಎರಡು ವರ್ಷಕ್ಕೊಮ್ಮೆ ಏಷ್ಯಾಕಪ್ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಲಾಯಿತು. ಭಾರತ ತಂಡ 1986ರಲ್ಲಿ ಶ್ರೀಲಂಕಾ ಜತೆಗಿನ ಕ್ರಿಕೆಟ್ ಸಂಬಂಧದ ಮನಃಸ್ಥಾಪದಿಂದ ಏಷ್ಯಾಕಪ್ನಲ್ಲಿ ಭಾಗವಹಿಸಲಿಲ್ಲ. ನಂತರ 1993ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ರಾಜಕೀಯ ಬಿಕ್ಕಟ್ಟಿನಿಂದಾಗಿ ಪಂದ್ಯಾವಳಿಯನ್ನು ರದ್ದು ಮಾಡಲಾಯಿತು. ಹಾಗಾಗಿ ಇದುವರೆಗೂ 11 ಬಾರಿ ಪಂದ್ಯಾವಳಿ ನಡೆದಿದ್ದು, ಈಗ 12ನೇ ಬಾರಿಗೆ ಆಯೋಜಿಸಲಾಗುತ್ತಿದೆ.  ಇದರಲ್ಲಿ ಭಾರತ 5 ಬಾರಿ ಚಾಂಪಿಯನ್  ಆಗುವ ಮೂಲಕ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡವಾಗಿದೆ. ಅಲ್ಲದೆ ಭಾರತ ತಂಡ 3 ಬಾರಿ ರನ್ನರ್ ಅಪ್ ಆಗಿದೆ. ಈ ಹಿಂದೆ ಯುಎಇ ಹಾಗೂ ಹಾಂಕಾಂಗ್ ತಂಡಗಳು ಪಂದ್ಯಾವಳಿಯಲ್ಲಿ ತಲಾ ಎರಡು ಬಾರಿ ಭಾಗವಹಿಸಿವೆಯಾದರೂ ಈ ಬಾರಿ ಭಾಗವಹಿಸುತ್ತಿಲ್ಲ.



2010ರ ಕ್ಷಣ ಮತ್ತೆ ನಮ್ಮದಾಗಲಿ

ಢಾಕಾ: ಕ್ರಿಕೆಟ್ ಅನ್ನು ತಮ್ಮ ಉಸಿರಂತೆ ಆರಾಧಿಸುವ ಖಂಡದಲ್ಲಿ ಅತಿಪತ್ಯ ಸಾಧಿಸಲು ಏಷ್ಯಾ ರಾಷ್ಟ್ರಗಳ ನಡುವಣ ರೋಚಕ ಕದನವಾದ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ಇಂದಿನಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ ಕಾದಾಟ ನಡೆಸಲಿದೆ. ಫೆ.25ರಂದು ಢಾಕಾದ ಫಾತುಲ್ಹಾದಲ್ಲಿ ಪಂದ್ಯಾವಳಿ ಆರಂಭವಾಗಲಿದ್ದು, ಏಷ್ಯಾದ ಐದು ರಾಷ್ಟ್ರಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ. ಈ ಬಾರಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಜತೆಗೆ ಮೊದಲ ಬಾರಿಗೆ ಆಫ್ಘಾನಿಸ್ತಾನವೂ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ.
ಪಂದ್ಯಾವಳಿಯಲ್ಲಿ ಪ್ರತಿ ತಂಡವು ರೌಂಡ್ ರಾಬಿನ್ ಮೂಲಕ ನಾಲ್ಕು ಪಂದ್ಯಗಳನ್ನಾಡಲಿದ್ದು, ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
ಭಾರತಕ್ಕೆ ಮಹತ್ವದ ಪಂದ್ಯಾವಳಿ: ಕಳೆದ ಮೂರು ತಿಂಗಳಿನಿಂದ ವಿದೇಶಿ ಪ್ರವಾಸದಲ್ಲಿ ಒಂದೇ ಒಂದು ಗೆಲುವನ್ನು ಕಾಣದೇ ನಿರಾಸೆ ಅನುಭವಿಸಿರುವ ಭಾರತಕ್ಕೆ ಈ ಏಷ್ಯಾಕಪ್ ಪಂದ್ಯಾವಳಿ ಮಹತ್ವದ್ದಾಗಿದೆ.
ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದೊಂದಿಗೆ ಬೀಗುತ್ತಿದ್ದ ಭಾರತ, ಕಳೆದೆರಡು ಸರಣಿಗಳನ್ನು ಕೈಚೆಲ್ಲಿದ ಪರಿಣಾಮ ಮೂರನೇ ಸ್ಥಾನಕ್ಕೆ ಕುಸಿದಿದೆ. ಹಾಗಾಗಿ ಭಾರತ ತಂಡ ಮತ್ತೆ ರ್ಯಾಂಕಿಂಗ್ನಲ್ಲಿ ಪ್ರಭುತ್ವ ಸಾಧಿಸಲು ಈ ಪಂದ್ಯಾವಳಿಯಲ್ಲಿ ಗೆಲವು ಅಗತ್ಯವಾಗಿದೆ. ಅಲ್ಲದೆ ಭಾರತ ತಂಡ ಈ ಪಂದ್ಯಾವಳಿಯಲ್ಲಿ ಕೆಲವು ಪ್ರಯೋಗಗಳೊಂದಿಗೆ ಕಣಕ್ಕಿಳಿಯುತ್ತಿದೆ. ಬಾಂಗ್ಲಾದೇಶದ ಪಿಚ್, ಬಹುತೇಕ ಭಾರತದ ಪಿಚ್ಗಳಂತೆ ವರ್ತಿಸಿದರೂ ಭಾರತಕ್ಕೆ ಪಾಕಿಸ್ಥಾನ, ಶ್ರೀಲಂಕಾ ಹಾಗೂ ಆತಿಥೇಯ ಬಾಂಗ್ಲಾದೇಶ ಪ್ರಬಲ ಪೈಪೋಟಿಯನ್ನೇ ನೀಡಲಿದೆ. ಹಾಗಾಗಿ ಭಾರತದ ಪ್ರದರ್ಶನ ಎಲ್ಲರ ಕೇಂದ್ರ ಬಿಂದುವಾಗಿದೆ.
ಕೊಹ್ಲಿಗೆ ನಾಯಕತ್ವದ ಜವಾಬ್ದಾರಿ: ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿ ಹಿನ್ನಲೆಯಲ್ಲಿ ಭಾರತ ತಂಡದ ಬ್ಯಾಟಿಂಗ್ನ ಆಧಾರ ಸ್ತಂಭವಾಗಿರುವ ವಿರಾಟ್ ಕೊಹ್ಲಿ ತಂಡದ ಜವಾಬ್ದಾರಿ ಹೊತ್ತಿದ್ದಾರೆ. ಅವರು ಭಾರತ ತಂಡಕ್ಕೆ ಕಳೆದ ನಾಲ್ಕು ವರ್ಷಗಳಿಂದ ಸ್ಥಿರ ಪ್ರದರ್ಶನದ ಮೂಲಕ ನೆರವಾಗಿದ್ದು, ನಾಯಕತ್ವದ ಜವಾಬ್ದಾರಿ ಹೊತ್ತು, ತಮ್ಮ ಸ್ಥಿರ ಪ್ರದರ್ಶನ ಮುಂದುವರಿಸುವರೇ ಎಂಬ ಕುತೂಹಲ ಮೂಡಿಸಿದೆ.
ತಂಡದಲ್ಲಿ ಯುವ ಆಟಗಾರರು ಹೆಚ್ಚಾಗಿದ್ದು, ಕೊಹ್ಲಿ ಈ ಆಟಗಾರರನ್ನು ಯಾವ ರೀತಿ ಮುನ್ನಡೆಸಲಿದ್ದಾರೆ. ಅಲ್ಲದೇ ಅವರು ಆಕ್ರಮಣಕಾರಿ ಮನೋಭಾವ ನಾಯಕತ್ವದಲ್ಲೂ ಮುಂದುವರಿಯುವುದೇ ಎಂಬುದು ಎಲ್ಲರ ಕೂತೂಹಲ ಕೆರಳಿಸಿದೆ.
ಅದರಲ್ಲೂ ಭಾರತ ಫೆ.26ರಂದು ಆತಿಥೇಯ ಬಾಂಗ್ಲಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಅಲ್ಲದೆ ಮಾ.2ರಂದು ಸಾಂಪ್ರಾದಾಯಿಕ ಎದುರಾಳಿ ಪಾಕ್ ವಿರುದ್ಧದ ಪಂದ್ಯ, ಕೊಹ್ಲಿ ನಾಯಕತ್ವಕ್ಕೆ ಸವಾಲೊಡ್ಡಲಿದೆ.
ಯುವಕರಿಗೆ ಅಗ್ನಿ ಪರೀಕ್ಷೆ: ಈ ಬಾರಿ ತಂಡದಲ್ಲಿ ಚೇತೇಶ್ವರ ಪೂಜಾರ, ವರೂಣ್ ಆರಾನ್, ಸ್ಟುವರ್ಟ್ ಬಿನ್ನಿ, ಈಶ್ವರ್ ಪಾಂಡೆಯಂತಹ ಹೊಸ ಆಟಗಾರರಿದ್ದು, ಉತ್ತಮ ಪ್ರದರ್ಶನ ನೀಡುವ ಒತ್ತಡದಲ್ಲಿದ್ದಾರೆ. ತಂಡದಲ್ಲಿ ಸುರೇಶ್ ರೈನಾ ಹಾಗೂ ಧೋನಿ ಅನುಪಸ್ಥಿತಿಯನ್ನು ಪೂಜಾರ ಹಾಗೂ ದಿನೇಶ್ ಕಾರ್ತಿಕ್ ತುಂಬಲಿದ್ದಾರೆ.
ಪೂಜಾರ ಏಕದಿನದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದರು. ಅಲ್ಲದೆ ಕಾರ್ತಿಕ್ ಉತ್ತಮ ಪ್ರದರ್ಶನದ ನಡುವೆಯೂ ತಂಡದಿಂದ ಹೊರಗುಳಿದು ನಿರಾಸೆ ಅನುಭವಿಸಿದ್ದರು. ಈ ಬಾರಿ ತಂಡಕ್ಕೆ ಆಯ್ಕೆಯಾಗಿರುವ ಈ ಇಬ್ಬರೂ ಬ್ಯಾಟ್ಸ್ಮನ್ಗಳು ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳುವರು ಎಂಬುದನ್ನು ಕಾದು ನೋಡಬೇಕು. ಇನ್ನು ಕರ್ನಾಟಕದ ಸ್ಟುವರ್ಟ್ ಬಿನ್ನಿ, ನ್ಯೂಜಿಲೆಂಡ್ ಪ್ರವಾಸದಲ್ಲಿ ಸರಿಯಾದ ಪ್ರಮಾಣದಲ್ಲಿ ಅವಕಾಶ ಪಡೆಯಲಿಲ್ಲ. ಹಾಗಾಗಿ ಉಪಖಂಡದ ಪಿಚ್ಗಳಲ್ಲಿ ಬಿನ್ನಿ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಯಾವ ರೀತಿ ಪರಿಣಾಮಕಾರಿಯಾಗಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.
ಉಳಿದಂತೆ ಧವನ್, ರೋಹಿತ್ ಶರ್ಮಾ ಆರಂಭಿಕರಾಗಿ ಮುಂದುವರಿಯಲಿದ್ದರೆ, ಜಡೇಜಾ ಹಾಗೂ ಅಶ್ವಿನ್ ಸ್ಪಿನ್ ವಿಭಾಗದಲ್ಲಿದ್ದಾರೆ. ಶಮಿ ಹಾಗೂ ಭುವನೇಶ್ವರ್ ಜತೆಗೆ ಯಾರು ವೇಗಿಯಾಗಿ ಸ್ಥಾನ ಪಡೆಯುವರು ಎಂಬುದನ್ನು ಕಾದು ನೋಡಬೇಕು.
ಪ್ರಶಸ್ತಿ ಮೇಲೆ ಪಾಕ್-ಲಂಕಾ ಕಣ್ಣು: ಈ ಬಾರಿ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸಹ ಪ್ರಬಲ ತಂಡಗಳಾಗಿ ಹೊರಹೊಮ್ಮಿವೆ. ಶ್ರೀಲಂಕಾ ತಂಡ ಇತ್ತೀಚೆಗೆ ಬಾಂಗ್ಲಾ ನೆಲದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಉತ್ತಮ ಯಶಸ್ಸು ಕಂಡಿದ್ದು, ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದೆ.
ಇನ್ನು ಕಳೆದ ಬಾರಿ ಚಾಂಪಿಯನ್ ಆಗಿರುವ ಪಾಕಿಸ್ತಾನ ತಂಡವೂ ಸಹ ಉತ್ತಮ ಲಯದಲ್ಲಿದೆ. ಹಾಗಾಗಿ ಈ ಎರಡೂ ತಂಡಗಳು ಪ್ರಶಸ್ತಿ ರೇಸ್ನಲ್ಲಿರುವ ಇತರೆ ಪ್ರಮುಖ ತಂಡಗಳೆಂದರೆ ತಪ್ಪಾಗಲಾರದು.



ವೇಳಾಪಟ್ಟಿ


ದಿನ ತಂಡಗಳು  ಸ್ಥಳ

ಫೆ.25  ಪಾಕಿಸ್ತಾನ-ಶ್ರೀಲಂಕಾ  ಫಾತುಲ್ಹಾ

ಫೆ.26 ಭಾರತ-ಬಾಂಗ್ಲಾದೇಶ  ಫಾತುಲ್ಹಾ

ಫೆ.27   ಆಫ್ಘಾನಿಸ್ತಾನ-ಪಾಕಿಸ್ತಾನ ಫಾತುಲ್ಹಾ

ಫೆ.28  ಭಾರತ-ಶ್ರೀಲಂಕಾ  ಫಾತುಲ್ಹಾ

ಮಾ.1  ಬಾಂಗ್ಲಾದೇಶ-ಆಫ್ಘಾನಿಸ್ತಾನ ಫಾತುಲ್ಹಾ

ಮಾ.2  ಭಾರತ-ಪಾಕಿಸ್ತಾನ ಮೀರ್ಪುರ

ಮಾ.3   ಆಫ್ಘಾನಿಸ್ತಾನ-ಶ್ರೀಲಂಕಾ ಮೀರ್ಪುರ

ಮಾ.4   ಬಾಂಗ್ಲಾದೇಶ-ಪಾಕಿಸ್ತಾನ ಮೀರ್ಪುರ

ಮಾ.5  ಭಾರತ-ಆಫ್ಘಾನಿಸ್ತಾನ ಮೀರ್ಪುರ

ಮಾ.6  ಬಾಂಗ್ಲಾದೇಶ-ಶ್ರೀಲಂಕಾ ಮೀರ್ಪುರ

ಮಾ.8  ಫೈನಲ್ ಮೀರ್ಪುರ

ಪಂದ್ಯದ ಸಮಯ: ಮಧ್ಯಾಹ್ನ 1.30ಕ್ಕೆ


ದಾಖಲೆಗಳು


ಟಿ     ಶ್ರೀಲಂಕಾದ ಜಯಸೂರ್ಯ 25 ಏಷ್ಯಾಕಪ್ ಪಂದ್ಯಗಳಿಂದ 1220 ರನ್ ದಾಖಲು.
ಟಿ     2010ರಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ದಂಬೂಲಾದಲ್ಲಿ 7 ವಿಕೆಟ್ಗೆ 385 ರನ್ ಗಳಿಸಿದ್ದು, ಏಷ್ಯಾಕಪ್ನಲ್ಲಿ ತಂಡ ಗಳಿಸಿರುವ ಅತ್ಯಧಿಕ ಮೊತ್ತ.
ಟಿ     2000ದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ ಢಾಕಾದಲ್ಲಿ 87 ರನ್ಗಳಿಗೆ ಆಲೌಟ್ ಆಗಿದ್ದು, ತಂಡವೊಂದರ ಕನಿಷ್ಠ ಮೊತ್ತ.
ಟಿ     2008ರಲ್ಲಿ ಭಾರತ ಕರಾಚಿಯಲ್ಲಿ ಹಾಂಕಾಂಗ್ ವಿರುದ್ಧ 256 ರನ್ಗಳ ಗೆಲವು, ತಂಡವೊಂದರ ಅತ್ಯಂತ ದೊಡ್ಡ ಗೆಲವು.
ಟಿ     2012ರಲ್ಲಿ ಢಾಕದಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ 183 ರನ್ ಗಳಿಸಿದ್ದು, ಗರಿಷ್ಠ ವೈಯಕ್ತಿಕ ಮೊತ್ತ.
ಟಿ     ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಗಳಿಸಿರುವ ದಾಖಲೆ ಸನತ್ ಜಯಸೂರ್ಯ(6) ಪಾಲಾಗಿದೆ.
ಟಿ     ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿರುವ ದಾಖಲೆ ಕುಮಾರ ಸಂಗಕ್ಕಾರ (9) ಪಾಲಾಗಿದೆ.
ಟಿ     2008ರಲ್ಲಿ ಸನತ್ ಜಯಸೂರ್ಯ 5 ಪಂದ್ಯಗಳಿಂದ 378 ರನ್ ದಾಖಲಿಸಿದ್ದು, ಒಂದು ಪಂದಾಯವಳಿಯಲ್ಲಿ ಬ್ಯಾಟ್ಸ್ಮನ್ ಗರಿಷ್ಠ ಮೊತ್ತ.
ಟಿ     ಶ್ರೀಲಂಕಾದ ಮುತ್ತಯ್ಯ ಮುರಳಿಧರನ್ 24 ಪಂದ್ಯಗಳಿಂದ 30 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್.
ಟಿ     2008ರಲ್ಲಿ ಶ್ರೀಲಂಕಾದ ಅಜಂತಾ ಮೆಂಡಿಸ್ ಭಾರತದ ವಿರುದ್ಧ 13ರನ್ಗೆ 6 ವಿಕೆಟ್ ಕಬಳಿಸಿದ್ದು, ಪಂದ್ಯವೊಂದರ ಶ್ರೇಷ್ಠ ಸಾಧನೆಯಾಗಿದೆ.


ಯಾವ ವರ್ಷ ಯಾರು ಚಾಂಪಿಯನ್


ವರ್ಷ   ಸ್ಥಳ  ಚಾಂಪಿಯನ್  ರನ್ನರ್ ಅಪ್
1984    ಶಾರ್ಜಾ ಭಾರತ ಶ್ರೀಲಂಕಾ

1986  ಶ್ರೀಲಂಕಾ  ಶ್ರೀಲಂಕಾ ಪಾಕಿಸ್ತಾನ
1988 ಬಾಂಗ್ಲಾದೇಶ ಭಾರತ ಶ್ರೀಲಂಕಾ
1990-91  ಭಾರತ  ಭಾರತ ಶ್ರೀಲಂಕಾ

1995  ಶಾರ್ಜಾ  ಭಾರತ ಶ್ರೀಲಂಕಾ
1997  ಶ್ರೀಲಂಕಾ  ಶ್ರೀಲಂಕಾ ಭಾರತ
2000 ಬಾಂಗ್ಲಾದೇಶ  ಪಾಕಿಸ್ತಾನ  ಶ್ರೀಲಂಕಾ
2004  ಶ್ರೀಲಂಕಾ  ಶ್ರೀಲಂಕಾ  ಭಾರತ
2008 ಪಾಕಿಸ್ತಾನ ಶ್ರೀಲಂಕಾ ಭಾರತ
2010  ಶ್ರೀಲಂಕಾ ಭಾರತ ಶ್ರೀಲಂಕಾ
2012 ಬಾಂಗ್ಲಾದೇಶ ಪಾಕಿಸ್ತಾನ ಬಾಂಗ್ಲಾದೇಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement