ನಾಯಕತ್ವದ ಪುಳಕದಲ್ಲಿ ಕೊಹ್ಲಿ
ಢಾಕಾ: ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿರುವ ಯುವ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಜವಾಬ್ದಾರಿಯಿಂದ ಪುಳಕಗೊಂಡಿದ್ದಾರಂತೆ.
ಭಾರತ ಉಪಖಂಡದಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯಾವಳಿಯಲ್ಲಿ ಕೊಹ್ಲಿ ಅವರು ಟೀಂ ಇಂಡಿಯಾಕ್ಕೆ ಹಂಗಾಮಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ನಡೆದ ಸರಣಿಗಳಲ್ಲಿ ಭಾರತ ತಂಡ ಹೀನಾಯವಾಗಿ ಸೋಲನುಭವಿಸಿರುವ ಹಿನ್ನೆಲೆಯಲ್ಲಿ, ಏಷ್ಯಾ ಕಪ್ನಲ್ಲಿ ತಂಡ ತನ್ನ ನೈಜ ಪ್ರದರ್ಶನ ತೋರುವ ಅಗತ್ಯವಿದೆ.'ನಾನು ಒಂದು ಪಂದ್ಯಾವಳಿಗೆ ಮಾತ್ರ ನಾಯಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಇದು ಕಾಯಂ ನಾಯಕನಿಗೆ ಇರುವ ಜವಾಬ್ದಾರಿಗಿಂತ ತುಂಬಾ ಭಿನ್ನವಾಗಿದೆ. ನಾವು ಗೆದ್ದಾಗ ಜನ ಹೊಗಳುತ್ತಾರೆ. ಸೋತಾಗ ಟೀಕಿಸುತ್ತಾರೆ. ಇದು ಕ್ರೀಡೆಯ ಭಾಗವಾಗಿದೆ. ಈ ಹಿಂದೆ ನಾನು ಕೆಲ ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡಂತೆಯೇ, ಈಗಲೂ ಒಂದು ಪಂದ್ಯಾವಳಿಗೆ ನಾಯಕತ್ವ ಜವಾಬ್ದಾರಿ ದೊರಕಿದೆ. ಇದೊಂದು ಕಠಿಣ ಜವಾಬ್ದಾರಿ ಎಂದು ನನಗೆ ಗೊತ್ತಿದೆ. ಆದರೆ, ಒಂದು ಬಾರಿ ಹೊಣೆಗಾರಿಕೆ ಹೊತ್ತಮೇಲೆ ಟೀಕೆ ಮತ್ತು ಹೊಗಳಿಕೆಗಳನ್ನು ಎದುರಿಸಲು ಸಿದ್ಧವಾಗಿರಬೇಕು' ಎಂದಿದ್ದಾರೆ ಕೊಹ್ಲಿ.
'ನಾನು ಈಗಾಗಲೇ 8 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದೇನೆ. ಅದರಲ್ಲಿ ಉತ್ತಮ ಅನುಭವವನ್ನು ನಾನು ಪಡೆದಿದ್ದೇನೆ. ಆದರೆ, ಇದೊಂದು ಪ್ರಮುಖ ಪಂದ್ಯಾವಳಿಯಾಗಿದ್ದು, ಹೊಸ ಸವಾಲುಗಳೊಂದಿಗೆ ಎಲ್ಲ ಪಂದ್ಯಗಳನ್ನು ಎದುರು ನೋಡುತ್ತಿದ್ದೇನೆ' ಎಂದಿದ್ದಾರೆ.