ನಿಜ ಜೀವನದಲ್ಲೂ ಶೇನ್ ವಾರ್ನ್ ದೂಸರಾ ಮೋಡಿ
ನವದೆಹಲಿ: ಪ್ರೇಯಸಿಯರನ್ನು ಬದಲಿಸುತ್ತಾ ಸುದ್ದಿಯಾಗುವ ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್, ನಿಜ ಜೀವನದಲ್ಲೂ ದೂಸರಾ ಮೋಡಿಯನ್ನು ಮುಂದುವರಿಸಿದ್ದಾರೆ. ಈಗ ಅವರು ತಮ್ಮ ಹಳೆಯ ಪ್ರೇಯಸಿ ಲಿಜ್ ಹರ್ಲಿ ಜತೆಗೆ ಖ್ಯಾತ ಉದ್ಯಮಿ ಹಾಗೂ ಶ್ರೀಮಂತೆ ಮಿಚೆಲ್ ಮೊನ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ.
ವ್ಯಾಲೆಂಟೈನ್ಸ್ ಡೇ ವಿಕ್ಎಂಡ್ನಲ್ಲಿ ತನ್ನ ಹಳೆಯ ಪ್ರೇಯಸಿ ಲಿಜ್ ಹರ್ಲಿ ಜತೆ ಕಾಲ ಕಳೆದ ವಾರ್ನ್, ನಂತರ ಮೊನ್ ಜತೆ ಸುಮಾರು ಗಂಟೆಗಳ ಕಾಲ ಡೇಟಿಂಗ್ ನಡೆಸಿದ್ದಾರೆ.
ವಾರ್ನ್ ಹಾಗೂ ಹರ್ಲಿ ಕಳೆದ ವರ್ಷ ಬೇರೆಯಾಗಿದ್ದರು. ಈಗ ಈ ಇಬ್ಬರು ಒಟ್ಟಿಗೆ ಸುತ್ತಾಡುವ ಮೂಲಕ ಮತ್ತೆ ತಮ್ಮ ಸಂಬಂಧವನ್ನು ಬೆಸೆದುಕೊಳ್ಳಲು ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ. ಆದರೆ ಎರಡು ದಿನಗಳ ಕಾಲ ಹರ್ಲಿ ಜತೆ ಕಾಲ ಕಳೆದ ವಾರ್ನ್, ಫೆ.16ರಂದು ಲಂಡನ್ನ ಡಾರ್ಚೆಸ್ಟರ್ ಹೊಟೇಲ್ನಲ್ಲಿ ಮೊನ್ ಜತೆ ಕಾಲ ಕಳೆದಿದ್ದಾರೆ.
ನಂತರದ ವಾರ್ನ್, ಶಾಂಪೆನ್ ಹಾಗೂ ರೋಸ್ನೊಂದಿಗೆ ಮೊನ್ ಅವರನ್ನು ಮತ್ತೆ ಭೇಟಿ ಮಾಡಿದ್ದಾರೆ. ನಂತರ ಇಬ್ಬರು ಕೆಲ ಕಾಲ ಒಟ್ಟಿಗೆ ಇದ್ದು, ನಂತರ ಬೇರೆಬೇರೆಯಾಗಿ ಹೊಟೇಲ್ನಿಂದ ತೆರಳಿದ್ದು ವರದಿಯಾಗಿದೆ.
ಮೊನ್ ಸಹ ಈ ಹಿಂದೆ 2012ರಲ್ಲಿ ರಾಬಿ ಸ್ಯಾವೇಜ್ ಎಂಬ ಫುಟ್ಬಾಲರ್ ಜತೆ ವಿವಾಹವಾಗಿದ್ದರು. ಈ ಜೋಡಿ ತಾವು ಉತ್ತಮ ಸ್ನೇಹಿತರು ಎಂದು ಹೇಳಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರೇಯಸಿಯರೊಂದಿಗೆ ವಾರ್ನ್ ಹೆಚ್ಚು ಸುದ್ದಿಯಾಗುವುದನ್ನು ಮುಂದುವರಿಸಿದ್ದಾರೆ.