ರ್ಯಾಂಕಿಂಗ್: 8ನೇ ಸ್ಥಾನಕ್ಕೆ ಕೊಹ್ಲಿ
ದುಬೈ: ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಭಾರತ ತಂಡದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 8ನೇ ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಕೊಹ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಾಲ್ಕು ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ಅವರು, ಒಟ್ಟು 214 ರನ್ ಗಳಿಸುವುದರೊಂದಿಗೆ, 784 ಅಂಕಗಳೊಂದಿಗೆ 1 ಸ್ಥಾನ ಬಡ್ತಿ ಪಡೆದು 8ನೇ ಸ್ಥಾನಕ್ಕೇರಿದ್ದಾರೆ.7ನೇ ಸ್ಥಾನದಲ್ಲಿರುವ ಚೇತೇಶ್ವರ ಪೂಜಾರ ಅವರು, ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಬ್ಯಾಟ್ಸ್ಮನ್ ಎನಿಸಿದ್ದಾರೆ. ದಕ್ಷಿಣ ಆಫ್ರಿಕಾ ಎಬಿ ಡಿವಿಲಿಯರ್ಸ್ ಮೊದಲ ಸ್ಥಾನದಲ್ಲಿದ್ದಾರೆ.ಇನ್ನು ಬೌಲಿಂಗ್ ವಿಭಾಗದಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಒಂದು ಸ್ಥಾನ ಬಡ್ತಿ ಪಡೆದಿದ್ದು, 9ನೇ ಸ್ಥಾನದಲ್ಲಿರುವುದರೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತದ ಬೌಲರ್ ಎನಿಸಿದ್ದಾರೆ. ಏತನ್ಮೆಧ್ಯೆ, ಅಶ್ವಿನ್ ಅವರು ಟೆಸ್ಟ್ ರ್ಯಾಂಕಿಂಗ್ನ ಆಲ್ರೌಂಡ್ ಆಟಗಾರರ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.ಆದರೆ, ತಂಡ ವಿಭಾಗದಲ್ಲಿ ಭಾರತದ ಎರಡನೇ ಸ್ಥಾನ ಕೈತಪ್ಪುವ ಸಾಧ್ಯತೆಗಳಿವೆ. ಕಾರಣ, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕೇವಲ ಡ್ರಾ ಸಾಧಿಸಿದರೆ ಸಾಕು 2ನೇ ಸ್ಥಾನಕ್ಕೇರಲಿದೆ. ಎರಡು ಟೆಸ್ಟ್ ಸರಣಿಗಳಲ್ಲಿ ಸೋಲನುಭವಿಸಿದ ಭಾರತ ತಂಡ 117ರಿಂದ 112 ರೇಟಿಂಗ್ ಪಾಯಿಂಟ್ಗಳಿಗೆ ಕುಸಿದಿದೆ. ಹೀಗಾಗಿ ಭಾರತ ತಂಡ ಆಸ್ಟ್ರೇಲಿಯಾಕ್ಕಿಂತ ಕೇವಲ ಒಂದು ರೇಟಿಂಗ್ ಪಾಯಿಂಟ್ ಮುಂದಿದೆ.ಇದರೊಂದಿಗೆ ಎಪ್ರಿಲ್ 1ರೊಳಗೆ ಭಾರತವನ್ನು ಹಿಂದಕ್ಕೆ ತಳ್ಳಿ ಅದಕ್ಕಿಂತ ಮೇಲೇರಲು ಆಸ್ಟ್ರೇಲಿಯಾಕ್ಕೆ ಉತ್ತಮ ಅವಕಾಶಗಳಿವೆ. ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನವನ್ನು ಈಗಾಗಲೇ ಖಚಿತಪಡಿಸಿಕೊಂಡಿದ್ದು, ಅದು ಟೆಸ್ಟ್ನಲ್ಲಿ ಅಗ್ರಸ್ಥಾನ ಪಡೆದ ತಂಡ ಪಡೆಯುವ ಮೇಸ್ ಅನ್ನು ಉಳಿಸಿಕೊಳ್ಳಲಿದೆ.