ಸವ್ಯಸಾಚಿ ಹೂಡಾಗೆ ತಲೆದೂಗಿದ ಲಂಕಾ
ದುಬೈ: ಪರಿಣಾಮಕಾರಿ ಆಲ್ರೌಂಡ್ ಪ್ರದರ್ಶನ ನೀಡಿದ ಭಾರತೀಯರು 19 ವರ್ಷದೊಳಗಿನವರ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 5ನೇ ಸ್ಥಾನಕ್ಕಾಗಿನ ಪ್ಲೇ-ಆಫ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯಭೇರಿ ಬಾರಿಸಿದ್ದಾರೆ.
ದುಬೈ ಐಸಿಸಿ ಅಕಾಡೆಮಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಭಾರತ, 76 ರನ್ಗಳಿಂದ ಶ್ರೀಲಂಕಾ ವಿರುದ್ಧ ಗೆಲವು ದಾಖಲಿಸಿತು.
ಭಾರತ ನೀಡಿದ 292 ರನ್ಗಳ ಕಠಿಣ ಗುರಿ ಬೆಂಬತ್ತಿದ್ದ ಶ್ರೀಲಂಕಾ ಕೇವಲ 215 ರನ್ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಸಾದೀರಾ ಸಮರವಿಕ್ರಮ (58) ಮತ್ತು ಪ್ರಿಯಾಮಲ್ ಪೆರೇರಾ (47) ಉತ್ತಮ ಹೋರಾಟ ನಡೆಸಿದ್ದು, ಫಲ ತಂದುಕೊಡಲಿಲ್ಲ.
ಭಾರತದ ಪರ ಬೌಲಿಂಗ್ನಲ್ಲೂ ಸೈ ಎನಿಸಿದ ದೀಪಕ್ ಹೂಡಾ 31 ರನ್ ನೀಡಿ 3 ವಿಕೆಟ್ ಉರುಳಿಸಿದರೆ, ಈ ಪಂದ್ಯದೊಂದಿಗೆ ಪದಾರ್ಪಣೆ ಮಾಡಿದ ಕರಣ್ ಕೈಲಾ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಉರುಳಿಸಿದರು.
ಮಿಂಚಿದ ಹೂಡಾ, ಭಾರತ ಉತ್ತಮ ಮೊತ್ತ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 291 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಏಳನೇ ಕ್ರಮಾಂಕದಲ್ಲಿ ಆಡಲಿಳಿದ ದೀಪಕ್ ಹೂಡಾ ಕೇವಲ 56 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ ಅಜೇಯ 76 ರನ್ ಸಿಡಿಸುವ ಮೂಲಕ ತಂಡಕ್ಕೆ ನೆರವಾದರು.
ಅಗ್ರಕ್ರಮಾಂಕದ ಬ್ಯಾಟ್ಸ್ಮನ್ಗಳ ಪೈಕಿ ಶ್ರೇಯಸ್ ಅಯ್ಯರ್ (59ರನ್, 70 ಎಸೆತ, 7 ಬೌಂಡರಿ) ಅರ್ಧಶತಕ ಬಾರಿಸಿದರು.
ನಾಯಕ ಸಂಜು ಸ್ಯಾಮ್ಸನ್ 53 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಹೊಂದಿದ್ದ 40 ರನ್ಗಳಿಸಿದರು. ಇಂಗ್ಲೆಂಡ್ ವಿರುದ್ಧದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೆಟ್ಟ ಶಬ್ದಗಳಿಂದ ಎದುರಾಳಿ ಆಟಗಾರನನ್ನು ನಿಂದಿಸಿದ ಕಾರಣಕ್ಕೆ ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದ ನಾಯಕ ವಿಜಯ್ ಜೋಲ್ ಅನುಪಸ್ಥಿತಿಯಲ್ಲಿ ಸ್ಯಾಮ್ಸನ್ ತಂಡವನ್ನು ಸಮರ್ಥವಾಗಿಯೇ ಮುನ್ನಡೆಸಿದರು.
ಶ್ರೀಲಂಕಾ ಪರ ಹಶನ್ ರಮಾನಾಯಕೆ, ಥೈರೊನೆ ಮತ್ತು ಫರ್ನಾಂಡೊ ತಲಾ 2 ವಿಕೆಟ್ ಪಡೆದರು. ಅತ್ಯುತ್ತಮ ಸವ್ಯಸಾಚಿ ಆಟ ಪ್ರದರ್ಶಿಸಿದ ದೀಪಕ್ ಹೂಡಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್
ಭಾರತ 50 ಓವರುಗಳಲ್ಲಿ 7 ವಿಕೆಟ್ಗೆ 291 (ದೀಪಕ್ ಹೂಡಾ ಅಜೇಯ 76, ಶ್ರೇಯಸ್ ಅಯ್ಯರ್ 59, ಸಂಜು ಸ್ಯಾಮ್ಸನ್ 40, ಅಂಕುಶ್ ಬೇನ್ಸ್ 29, ಅಖಿಲ್ ಹೆರ್ವಾಡ್ಕರ್ 23, ಹಶನ್ ರಮಾನಾಯಕೆ 46ಕ್ಕೆ2, ಎಕೆ ಥೈರೊನೆ 59ಕ್ಕೆ2, ಅನುಕ್ ಫರ್ನಾಂಡೊ 79ಕ್ಕೆ2). ಶ್ರೀಲಂಕಾ 48.1 ಓವರುಗಳಲ್ಲಿ 215 (ಸಾದೀರಾ ಸಮರವಿಕ್ರಮ 58, ಪ್ರಿಯಾಮಲ್ ಪೆರೇರಾ 47, ಹಶನ್ ರಮಾನಾಯಕೆ 27, ಲಕ್ಷಣ್ ಜಯಸಿಂಘೆ ಅಜೇಯ 25, ದೀಪಕ್ ಹೂಡಾ 31ಕ್ಕೆ3, ಕರಣ್ ಕೈಲಾ 39ಕ್ಕೆ2, ಕುಲ್ದೀಪ್ ಯಾದವ್ 54ಕ್ಕೆ2).