ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಸೈನಾ ನೆಹವಾಲ್ಗೆ 7ನೇ ಶ್ರೇಯಾಂಕ
ಬರ್ಮಿಂಗ್ಹ್ಯಾಮ್: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹವಾಲ್ ಮಾರ್ಚ್ 4ರಿಂದ 9ರ ವರೆಗೆ ನಡೆಯಲಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ 7ನೇ ಶ್ರೇಯಾಂಕದ ಗೌರವ ಪಡೆದಿದ್ದಾರೆ.
ರಾಷ್ಟ್ರೀಯ ಒಳಾಂಗಣ ಏರೇನಾದಲ್ಲಿ ನಡೆಯುತ್ತಿರುವ 104ನೇ ಆವೃತ್ತಿಯ ಸೂಪರ್ ಸೀರೀಸ್ ಪ್ರೀಮಿಯರ್ ಟೂರ್ನಿಯಲ್ಲಿ ಸೈನಾ ನೆಹವಾಲ್ ಭಾರತದ ಪರ ಶ್ರೇಯಾಂಕ ಹೊಂದಿರುವ ಏಕೈಕ ಆಟಗಾರ್ತಿಯಾಗಿದ್ದಾರೆ.
2010 ಹಾಗೂ 2013ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ಹೈದರಾಬಾದ್ ಆಟಗಾರ್ತಿಯ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿನ ಉತ್ತಮ ಸಾಧನೆಯಾಗಿದೆ. ಈ ಬಾರಿ ಸೈನಾ ತಮ್ಮ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಸ್ಕಾಂಟ್ಲೆಂಡ್ನ ಕರ್ಸ್ಟಿ ಗಿಲ್ಮೊರ್ ಅವರನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.
ಹೈದರಾಬಾದ್ನ ಮತ್ತೊಬ್ಬ ಆಟಗಾರ್ತಿ, ವಿಶ್ವ ಚಾಂಪಿಯನ್ಶಿಪ್ನ ಕಂಚಿನ ಪದಕ ವಿಜೇತೆ 18ರ ಪಿ.ವಿ. ಸಿಂಧು, ತಮ್ಮ ಮೊದಲ ಸುತ್ತಿನಲ್ಲಿ ಚೀನಾದ ಯೂ ಸನ್ ವಿರುದ್ಧ ಸೆಣಸಲಿದ್ದಾರೆ.
ಪುರುಷರ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್ ಮತ್ತು ಕೆ. ಶ್ರೀಕಾಂತ್ ಪ್ರಧಾನ ಹಂತಕ್ಕೆ ನೇರವಾಗಿ ಅರ್ಹತೆ ಪಡೆದುಕೊಂಡಿರುವ ತವರಿನ ಮತ್ತಿಬ್ಬರು ಆಟಗಾರರಾಗಿದ್ದಾರೆ.