ಲಂಕೆಗೆ ಶರಣಾದ ಪಾಕ್
ಫಾತುಲ್ಲಾ: ರೋಚಕವಾಗಿ ನಡೆದ ಏಷ್ಯಾ ಕಪ್ನ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನವನ್ನು 12 ರನ್ಗಳ ಅಂತರದಿಂದ ಪರಾಭವಗೊಳಿಸಿ ಶುಭಾರಂಭ ಮಾಡಿತು. ಅಮೋಘ ಶತಕ ಸಿಡಿಸಿದ ಲಹೀರು ತಿರಿಮನೆ ಶ್ರೀಲಂಕಾ ಜಯ ಕಾಣಲು ಪ್ರಮುಖ ಪಾತ್ರವಹಿಸಿದರು.
110 ಎಸೆತಗಳನ್ನು ಎದುರಿಸಿದ ತಿರಿಮನೆ (102) ಅವರ ಶತಕದಲ್ಲಿ 1 ಸಿಕ್ಸರ್ ಮತ್ತು 11 ಬೌಂಡರಿಗಳು ಸೇರಿಕೊಂಡಿದ್ದವು. ತಿರಿಮನೆ ಅವರಿಗೆ ಕುಮಾರ ಸಂಗಕ್ಕಾರ (67) ತಕ್ಕ ಸಾಥ್ ನೀಡಿದರು.
ಇಬ್ಬರ ಜೊತೆಯಾಟದಲ್ಲಿ 2ನೇ ವಿಕೆಟ್ಗೆ 161 ರನ್ ಕಲೆ ಹಾಕುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ಮಧ್ಯಮ ಕ್ರಮಾಂಕದಲ್ಲಿ ಕೆಲ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಪಾಕಿಸ್ತಾನದ ಬೌಲರ್ಗಳು ಲಂಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ಯತ್ನಿಸಿದರು. ಆದರೆ, ನಂತರ ಬಂದ ನಾಯಕ ಏಂಜೆಲೋ ಮ್ಯಾಥ್ಯೂಸ್ (ಅಜೇಯ 55) ಆಕರ್ಷಕ ಅರ್ಧ ಶತಕ ದಾಖಲಿಸುವ ಮೂಲಕ ಪಾಕ್ ಬೌಲರ್ಗಳನ್ನು ದಂಡಿಸುವುದರೊಂದಿಗೆ ತಂಡಕ್ಕೆ ಆಶ್ರಯವಾದರು. ಮ್ಯಾಥ್ಯೂಸ್ ಅರ್ಧ ಶತಕದಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು.
ಪಾಕಿಸ್ತಾನದ ಪರ ತಕ್ಕ ಬೌಲಿಂಗ್ ಪ್ರದರ್ಶಿಸಿದ ಉಮರ್ ಗುಲ್ ಮತ್ತು ಶಹೀದ್ ಅಫ್ರಿದಿ ಅವರು ತಲಾ 2 ವಿಕೆಟ್ ಕಬಳಿಸಿದರೆ, ಸಯೀದ್ ಅಜ್ಮಲ್ 1 ವಿಕೆಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, ಆರಂಭಿಕ ಆಟಗಾರ ಕುಸಾಲ್ ಪೆರೇರಾ (14) ಉಮರ್ ಗುಲ್ ಎಸೆತದಲ್ಲಿ ಬೇಗನೆ ನಿರ್ಗಮಿಸಿದರೂ ವಿಚಲಿತಗೊಳ್ಳದೆ, ಆಕರ್ಷಕ ಮೊತ್ತ ಕಲೆ ಹಾಕಿತು.
ಇನ್ನೊಂದು ಬದಿಯಲ್ಲಿದ್ದ ತಿರಿಮನೆ ಅವರು ನಂತರ ಬಂದ ಸಂಗಕ್ಕಾರ ಅವರೊಂದಿಗೆ ತಕ್ಕ ಸಾಥ್ ನೀಡುವ ಮೂಲಕ, 20ನೇ ಓವರ್ನಲ್ಲಿ ಅರ್ಧ ಶತಕ ಪೂರೈಸಿದರು. ಅದು ಕಳೆದ ಜುಲೈನಿಂದ ಇದೇ ಮೊದಲ ಬಾರಿಗೆ ಅವರ ಅರ್ಧಶತಕವಾಗಿತ್ತು. ತಿರಿಮನೆ ಮತ್ತು ಸಂಗಕ್ಕಾರ ಅವರು ಶ್ರೀಲಂಕಾಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ಲಂಕಾ ಇನಿಂಗ್ಸ್ನ ಅಂತ್ಯದಲ್ಲಿ ಸೈಯಿದ್ ಅಜ್ಮಲ್ ಮತ್ತು ಜುನೈದ್ ಖಾನ್ ಅವರು ಮೊನಚಾದ ಬೌಲಿಂಗ್ ಪ್ರದರ್ಶಿಸಿದರು. ಆದಾಗ್ಯೂ, ದಿನೇಶ್ ಚಾಂಡಿಮಲ್ (ಅಜೇಯ 19) ಮತ್ತು ಮ್ಯಾಥ್ಯೂಸ್ ಅವರು 7ನೇ ವಿಕೆಟ್ಗೆ 45 ರನ್ ಹಂಚಿಕೊಂಡರು. ಹೀಗಾಗಿ ಲಂಕಾ ಅಂತಿಮವಾಗಿ ನಿಗದಿತ ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 296 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.
ಮಿಸ್ಬಾ- ಉಮರ್ ವ್ಯರ್ಥ ಪ್ರಯತ್ನ: ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 48.5 ಓವರ್ಗಳಲ್ಲಿ 284 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಪರಾಭವ ಹೊಂದಿತು.
ಮಧ್ಯಮ ಕ್ರಮಾಂಕದಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಮಿಸ್ಬಾ ಉಲ್ ಹಕ್ (73) ಮತ್ತು ಉಮರ್ ಅಕ್ಮಲ್ (74) ಅವರು 5ನೇ ವಿಕೆಟ್ಗೆ 121 ರನ್ ಪೇರಿಸುವ ಮೂಲಕ ತಂಡವನ್ನು ಜಯದ ಹಾದಿ ಹಿಡಿಸಿದ್ದರು. ಆದರೆ, 43ನೇ ಓವರ್ನಲ್ಲಿ ಉಮರ್ ಅಕ್ಮಲ್ ಅವರು ಸುರಂಗಾ ಲಕ್ಮಲ್ ಬೌಲಿಂಗ್ನಲ್ಲಿ ಕುಮಾರ ಸಂಗಕ್ಕಾರ ಅವರಿಗೆ ಕ್ಯಾಚ್ ನೀಡಿದ್ದು, ಪಾಕಿಸ್ತಾನಕ್ಕೆ ಆಘಾತ ಉಂಟುಮಾಡಿತು. ನಂತರ 45ನೇ ಓವರ್ನಲ್ಲಿ ಮಿಸ್ಬಾ ಉಲ್ ಹಕ್ ಸಹ ಲಸಿತ್ ಮಾಲಿಂಗ್ ಎಸೆತದಲ್ಲಿ ಸಚಿತ್ರ ಸೇನಾನಾಯಕ್ ಅವರಿಗೆ ಕ್ಯಾಚ್ ನೀಡಿದಾಗ ಪಾಕಿಸ್ತಾನದ ಗೆಲುವಿನ ಹಾದಿ ದುರ್ಗಮವಾಗಿ ಪರಿಣಮಿಸಿತು.
ಶ್ರೀಲಂಕಾ 50 ಓವರ್ಗಳಲ್ಲಿ 6 ವಿಕೆಟ್ಗೆ 296
ಲಹಿರು ತಿರಿಮಾನ್ನೆ 102, ಕುಮಾರ ಸಂಗಕ್ಕಾರ 67, ಆ್ಯಂಜಲೋ ಮ್ಯಾಥ್ಯೂಸ್ ಅಜೇಯ 55, ದಿನೇಶ್ ಚಂಡಿಮಲ್ ಅಜೇಯ 19, ಉಮರ್ ಗುಲ್ 38ಕ್ಕೆ2, ಶಹೀದ್ ಅಫ್ರೀದಿ 56ಕ್ಕೆ2, ಸಯೀದ್ ಅಜ್ಮಲ್ 50ಕ್ಕೆ1
ಪಾಕಿಸ್ತಾನ 50 ಓವರ್ಗಳಲ್ಲಿ 48.5 ಓವರ್ಗಳಲ್ಲಿ 284
ಉಮರ್ ಅಕ್ಮಲ್ 74, ಮಿಸ್ಬಾ ಉಲ್ ಹಕ್ 73, ಅಹ್ಮದ್ ಶೆಹಜಾದ್ 28, ಶರ್ಜೀಲ್ ಖಾನ್ 26, ಲಸಿತ್ ಮಲಿಂಗಾ 52ಕ್ಕೆ5, ಸುರಾಂಗಾ ಲಕ್ಮಲ್ 65ಕ್ಕೆ2