ಅಂತರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್: ರು. 6.2 ಕೋಟಿ ಪಡೆಯಲಿದ್ದಾರಾ ನಡಾಲ್?
ಹಣದ ಹೊಳೆ ಹರಿಸುತ್ತಿರುವ ಐಪಿಎಲ್, ಈಗ ಜನಪ್ರಿಯ ಕ್ರೀಡೆಗಳಲ್ಲೊಂದಾದ ಟೆನಿಸ್ ಮೇಲೂ ತನ್ನ ಪ್ರಭಾವ ಬೀರಿದೆ. ಭಾರತದ ಹಿರಿಯ ಟೆನಿಸ್ ತಾರೆ ಮಹೇಶ್ ಭೂಪತಿ ಅವರು ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ ಪಂದ್ಯಾವಳಿ ಆರಂಭಿಸಲು ನೀಲ ನಕ್ಷೆ ಯನ್ನು ಸಿದ್ಧಪಡಿಸಿದ್ದಾರೆ. ಅದರಲ್ಲಿ ವಿಶ್ವದ ಅಗ್ರ ಟೆನಿಸ್ ತಾರೆ ರಾಫೆಲ್ ನಡಾಲ್ ಅವರು ಅತಿ ಹೆಚ್ಚು ಅಂದರೆ, ರು. 6.2 ಕೋಟಿ ಹಣ ಗಳಿಸಲಿದ್ದಾರೆ ಎಂದು ವರದಿಯಾಗಿದೆ. ಭೂಪತಿ ಅವರು ಈ ವಾರಾಂತ್ಯದಲ್ಲಿ ದುಬೈಯಲ್ಲಿ ಪಂದ್ಯಾವಳಿಯಲ್ಲಿ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ. ಬ್ಯಾಂಕಾಕ್, ಕೌಲಾಲಂಪುರ, ಮುಂಬೈ, ಸಿಂಗಾಪುರ ಹಾಗೂ ಹಾಂಕಾಂಗ್ನಲ್ಲಿ ನವೆಂಬರ್ 28ರಿಂದ ಡಿಸೆಂಬರ್ 20ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸಲು ನಡಾಲ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ತಂಡಗಳು ತಮ್ಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಬರುವ ಭಾನುವಾರ ದುಬೈನ ಹೋಟೆಲ್ಲೊಂದರಲ್ಲಿ ಬಿಡ್ ಮಾಡಲಿವೆಯಂತೆ. ಕೆಲ ಅಂತಾರಾಷ್ಟ್ರೀಯ ಅಗ್ರ ಆಟಗಾರರು ಇದರಲ್ಲಿ ಭಾಗವಹಿಸಲು ಆಸಕ್ತಿ ತೋರಿದ್ದಾರಂತೆ. ವರದಿಗಳ ಪ್ರಕಾರ ನಡಾಲ್ ಅವರು ಮಾರ್ಕೀ ಆಟಗಾರನಾಗಿದ್ದು, ವಿಂಬಲ್ಡನ್ ಚಾಂಪಿಯನ್ ಆ್ಯಂಡಿ ಮರ್ರೆ ಅವರು ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಭೂಪತಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಇನ್ನು ಮಹಿಳೆಯರ ವಿಭಾಗದಲ್ಲಿ ಎರಡು ಬಾರಿ ಆಸ್ಟ್ರೇಲಿಯಾ ಓಪನ್ ಗೆದ್ದಿರುವ ವಿಕ್ಟೋರಿಯಾ ಅಜರೆಂಕಾ, ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಕಾರೋಲಿನ್ ವೊಜ್ನಿಕ್ಕಿ ಮತ್ತು ಪೊಲೆಂಡ್ನ ನಂಬರ್ 1 ಆಟಗಾರ್ತಿ ಆ್ಯಗ್ನಿಸೆಕಾ ರಾಡ್ವಾಂಸ್ಕಾ ಅವರು ಸಿಂಗಲ್ಸ್ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.