ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿನಯ್ ಪಡೆಗೆ ಆಂಧ್ರ ಸವಾಲು

Mainashree
Updated On : 26 Feb 2014, 10:25 am

ಬೆಂಗಳೂರು: ಪ್ರಸಕ್ತ ಸಾಲಿನ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಪ್ರಭುತ್ವ ಸಾಧಿಸಿರುವ ಕರ್ನಾಟಕ ತಂಡ ಸುಬ್ಬಯ್ಯ ಪಿಳ್ಳೈ ಟ್ರೋಫಿ ಪಂದ್ಯಾವಳಿಯಲ್ಲಿ ಆಂಧ್ರಪ್ರದೇಶ ವಿರುದ್ಧ ಕಾದಾಡಲಿದೆ. ಅಲ್ಲದೆ ತಮ್ಮ ಗೆಲವಿನ ಲಯವನ್ನು ಮುಂದುವರಿಸಲು ಸಜ್ಜಾಗಿದೆ.
ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡ ಎದುರಾಳಿ ಆಂಧ್ರ ಪ್ರದೇಶ ವಿರುದ್ಧ ಗೆಲವು ದಾಖಲಿಸುವ ಮೂಲಕ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಲು ನಿರ್ಧರಿಸಿದೆ.
ರಣಜಿ ಪಂದ್ಯಾವಳಿಯಲ್ಲಿ ಸೋಲಿಲ್ಲದ ಸರದಾರರಂತೆ ಮೆರೆದ ಕರ್ನಾಟಕ ತಂಡದ ಆಟಗಾರರು, ನಂತರ ನಡೆದ ಇರಾನಿ ಟ್ರೋಫಿ ಪಂದ್ಯಾವಳಿಯಲ್ಲೂ ಶೇಷ ಭಾರತ ತಂಡದ ವಿರುದ್ಧ ಅರ್ಹ ಗೆಲವು ದಾಖಲಿಸುವುದರೊಂದಿಗೆ ತಮ್ಮ ಪ್ರಭುತ್ವವನ್ನು ಮುಂದುವರಿಸಿತ್ತು.
ಇದೇ ರೀತಿಯ ಸಂಘಟಿತ ಹಾಗೂ ಪರಿಣಾಮಕಾರಿ ಪ್ರದರ್ಶನವನ್ನು ಏಕದಿನ ಮಾದರಿಯಾದ ಸುಬ್ಬಯ್ಯ ಪಿಳ್ಳೈ ಟ್ರೋಫಿಯಲ್ಲೂ ಮುಂದುವರಿಸಲು ಸಜ್ಜಾಗಿದೆ.
ಗೆಲವಿನ ವಿಶ್ವಾಸದಲ್ಲಿ ರಾಜ್ಯ ತಂಡ: ಯುವ ಆಟಗಾರರು ಹಾಗೂ ಅನುಭವಿ ಆಟಗಾರರಿಂದ ಕೂಡಿರುವ ಕರ್ನಾಟಕ ತಂಡ ಅತ್ಯುತ್ತಮ ಸಮತೋಲಿತ ತಂಡವಾಗಿದೆ. ಅಲ್ಲದೆ ರಾಜ್ಯ ತಂಡ ಪ್ರಸಕ್ತ ಸಾಲಿನಲ್ಲಿ ಗೆಲವಿನ ಅಲೆಯಲ್ಲಿ ತೇಲುತ್ತಿದ್ದು, ಈ ಟೂರ್ನಿಯಲ್ಲೂ ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ.
ರಾಬಿನ್ ಉತ್ತಪ್ಪ, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಸಿ.ಎಂ ಗೌತಮ್, ಮನೀಷ್ ಪಾಂಡೆ, ಗಣೇಶ್ ಸತೀಶ್‌ರಂತಹ ಅನುಭವಿ ಆಟಗಾರರೊಂದಿಗೆ, ಶ್ರೇಯಸ್ ಗೋಪಾಲ್, ಕೆ.ಎಲ್ ರಾಹುಲ್, ಎಚ್.ಎಸ್ ಶರತ್, ಕರುಣ್ ನಾಯರ್‌ರಂತ ಯುವ ಹಾಗೂ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿದೆ.
ರಾಜ್ಯ ತಂಡದಲ್ಲಿ ಸ್ಟುವರ್ಟ್ ಬಿನ್ನಿ ಹೊರತು ಪಡಿಸಿದರೆ ಉಳಿದಂತೆ ರಣಜಿಯಲ್ಲಿ ಮಿಂಚಿದ ಎಲ್ಲಾ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಆಂಧ್ರ ಪ್ರದೇಶ ತಂಡವನ್ನು ನೋಡುವುದಾದರೆ, ಈ ತಂಡ ರಾಜ್ಯ ತಂಡದ ರೀತಿ ಖ್ಯಾತ ಆಟಗಾರರ ಒಳಗೊಂಡಿಲ್ಲ. ಪ್ರಶಾಂತ್ ಕುಮಾರ್ ಡಿ.ಬಿ ತಂಡದ ಸಾರಥ್ಯವನ್ನು ವಹಿಸಲಿದ್ದಾರೆ. ಆಂಧ್ರ ಪ್ರದೇಶ ತಂಡ ರಣಜಿ ಪಂದ್ಯಾವಳಿಯಲ್ಲಿನ ಪ್ರದರ್ಶನ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ.
ರಣಜಿ ಪಂದ್ಯಾವಳಿಯಲ್ಲಿ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಆಂಧ್ರ ಪ್ರದೇಶ ತಂಡ 7ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಆಡಿದ 8 ಪಂದ್ಯಗಳಲ್ಲಿ 1ರಲ್ಲಿ ಗೆಲವು, 2ರಲ್ಲಿ ಸೋಲು ಹಾಗೂ 5 ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು.
ಹಾಗಾಗಿ ಈ ಪಂದ್ಯದಲ್ಲಿ ಕರ್ನಾಟಕ ತಂಡ ಗೆಲ್ಲುವ ಫೆವರಿಟ್ ತಂಡವಾಗಿದ್ದರೂ, ಎದುರಾಳಿ ತಂಡ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕು.
ತಂಡಗಳು:
ಕರ್ನಾಟಕ: ವಿನಯ್ ಕುಮಾರ್(ನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್ ರಾಹುಲ್, ಗಣೇಶ್ ಸತೀಶ್, ಮನೀಷ್ ಪಾಂಡೆ, ಸಿ.ಎಂ ಗೌತಮ್, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಎಚ್.ಎಸ್ ಶರತ್, ಮಾಯಾಂಕ್ ಅಗರ್‌ವಾಲ್, ಎಸ್.ಅರವಿಂದ್, ರೋನಿತ್ ಮೊರೆ, ಅಬ್ರಾರ್ ಕಾಜಿ, ಅಮಿತ್ ವರ್ಮಾ, ಕುನಾಲ್ ಕಪೂರ್
ಆಂಧ್ರಪ್ರದೇಶ: ಪ್ರಶಾಂತ್ ಕುಮಾರ್ ಡಿ.ಬಿ, ಶಿವ ಕುಮಾರ್ .ಡಿ, ಶ್ರೀಕರ್ ಭರತ್, ಶ್ರೀರಾಮ್, ಸುಮಂತ್, ಪ್ರದೀಪ್, ಜ್ಯೋತಿ ಸಾಯಿ ಕೃಷ್ಣ, ಸ್ವರೂಪ್ ಕುಮಾರ್, ಜಿವಿಎಸ್ ಪ್ರಸಾದ್, ಭರತ್ ರೆಡ್ಡಿ, ಸುಧಾಕರ್, ಪ್ರವೀಣ್, ವಿಜಯ್ ಕುಮಾರ್, ಹರಿಶ್ ಕೆ, ಅಚುತ್ ರಾವ್ ಟಿ


ಕರ್ನಾಟಕ ಪಂದ್ಯಗಳ ವೇಳಾಪಟ್ಟಿ:
ದಿನಾಂಕ,ತಂಡಗಳು,ಸ್ಥಳ-ಫೆ.27,ಕರ್ನಾಟಕ-ಆಂಧ್ರಪ್ರದೇಶ,ಚಿನ್ನಸ್ವಾಮಿ ಕ್ರೀಡಾಂಗಣ
-ಫೆ.28,ಕರ್ನಾಟಕ-    ಹೈದರಾಬಾದ್,ಚಿನ್ನಸ್ವಾಮಿ ಕ್ರೀಡಾಂಗಣ
-ಮಾ.2,ಕರ್ನಾಟಕ-ಕೇರಳ,ಆಲೂರು(1) ಕ್ರೀಡಾಂಗಣ
-ಮಾ.3,ಕರ್ನಾಟಕ-    ಗೋವಾ,ಆಲೂರು(3) ಕ್ರೀಡಾಂಗಣ
-ಮಾ.5,ಕರ್ನಾಟಕ-    ತಮಿಳುನಾಡು,ಚಿನ್ನಸ್ವಾಮಿ ಕ್ರೀಡಾಂಗಣ

ಪಂದ್ಯ ಆರಂಭ ವೇಳೆ: ಬೆಳಗ್ಗೆ 9:00 ಗಂಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement