ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಿಂಹಳೀಯರ ಬೇಟೆಗೆ ಭಾರತ ಸನ್ನದ್ಧ

Mainashree
Updated On : 27 Feb 2014, 11:53 am

ಫಾತುಲ್ಲಾ: ಉಪಖಂಡಗಳ ರಣಾಂಗಣ ಎನಿಸಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯಗಳನ್ನು ಗೆದ್ದು ಭರ್ಜರಿ ಆರಂಭ ಪಡೆದಿರುವ ಭಾರತ ಮತ್ತು ಶ್ರೀಲಂಕಾ ತಂಡಗಳು ಶುಕ್ರವಾರ ಇಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳಿಂದ ಜಯಗಳಿಸಿದ್ದರೆ, ಶ್ರೀಲಂಕನ್ನರು 12 ರನ್‌ಗಳಿಂದ ಪಾಕಿಸ್ತಾನ ವಿರುದ್ಧ ಗೆಲವಿನ ಕೇಕೆ ಹಾಕಿದ್ದರು. ಈಗ ನಾಳೆ ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಆಟಗಾರರು ಗೆಲವಿನ ಅಭಿಯಾನ ಮುಂದುವರಿಸಿಕೊಂಡು ಹೋಗುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಡುವ ಕನಸು ಕಟ್ಟಿಕೊಂಡಿದ್ದಾರೆ.
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ, ಒತ್ತಡದ ಪರಿಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಆಸರೆ ಒದಗಿಸಿದ್ದು ಹಾಗೂ ಬೌಲಿಂಗ್‌ನಲ್ಲಿ ಮಧ್ಯಮ ವೇಗಿ ಮೊಹಮ್ಮದ್ ಶಮಿ 4 ವಿಕೆಟ್ ಉರುಳಿಸಿದ್ದು, ಭಾರತಕ್ಕೆ ನಿರೀಕ್ಷೆಯಂತೆ ಜಯದ ಫಲಿತಾಂಶ ತಂದುಕೊಡುವಲ್ಲಿ ಪ್ರಮುಖ ಅಂಶಗಳಾದವು.
ಆದರೆ, ಈ ಪಂದ್ಯದಲ್ಲೂ ಹಲವು ನ್ಯೂನತೆಗಳು ಟೀಂ ಇಂಡಿಯಾವನ್ನು ಚಿಂತೆಗೀಡು ಮಾಡಿವೆ. ಆರಂಭಿಕ ದಾಂಡಿಗರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮತ್ತೆ ವಿಫಲರಾದರೆ, ಬೌಲಿಂಗ್ ವಿಭಾಗ ಕೂಡ ಹೆಚ್ಚು ಮೊನಚಿನಿಂದ ಕೂಡಿರಲಿಲ್ಲ. ಭಾರತದ ದುರ್ಬಲ ಬೌಲಿಂಗ್‌ನ ಲಾಭ ಪಡೆಯುವಲ್ಲಿ ಯಶಸ್ವಿಯಾದ ಬಾಂಗ್ಲಾ ಒಂದು ಹಂತದಲ್ಲಿ ತ್ರಿಶತಕದ ಗಡಿ ದಾಟುವ ಹಾದಿಯಲ್ಲಿದ್ದರು. ಆದರೂ ಅಂತಿಮವಾಗಿ 279 ರನ್‌ಗಳಿಸಿದ್ದು ಬಾಂಗ್ಲಾ ಪಾಲಿಗೆ ದೊಡ್ಡ ಮೊತ್ತವೇ ಆಗಿತ್ತು.
ಮುಖ್ಯವಾಗಿ ಭಾರತಕ್ಕೆ ಆರಂಭಿಕ ಆಟಗಾರರ ವೈಫಲ್ಯವೇ ಸಮಸ್ಯೆಯಾಗಿದೆ. ಇದರಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಬೀಳುತ್ತಿದೆ. ಮಧ್ಯಮ ಹಂತದಲ್ಲಿ ಕೊಹ್ಲಿ, ಜವಾಬ್ದಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿಯೇ ನಿಭಾಯಿಸಿ ಅನೇಕ ಬಾರಿ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದ್ದಾರೆ. ಆದರೆ, ಕೊಹ್ಲಿ ಕೈಕೊಟ್ಟರೆ ಭಾರತದ ಸ್ಥಿತಿ ಶೋಚನೀಯವಾಗುವುದರಲ್ಲಿ ಅನುಮಾನವಿಲ್ಲ. ನ್ಯೂಜಿಲೆಂಡ್ ಪ್ರವಾಸದಲ್ಲಿ ಇದು ಸಾಬೀತಾಗಿದೆ. ಹಾಗಾಗಿ, ಆರಂಭಿಕ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಜವಾಬ್ದಾರಿ ಹೊರುವುದು ಅಗತ್ಯವಾಗಿದೆ.
ಅದೇ ರೀತಿ ಬೌಲಿಂಗ್ ವಿಭಾಗ ಕೂಡ ಸುಧಾರಿತ ಪ್ರದರ್ಶನ ನೀಡಬೇಕಿದೆ. ಶಮಿ ಉತ್ತಮ ದಾಳಿ ನಡೆಸುತ್ತಿದ್ದರೆ, ಮತ್ತೊಂದು ತುದಿಯ ಬೌಲರ್‌ಗಳು ಬೇಗನೆ ವಿಕೆಟ್ ಉರುಳಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ.
ನಾಳಿನ ಪಂದ್ಯದಲ್ಲಿ ಬಹುಶಃ ಭಾರತ ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆ ವಿರಳ. ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದರೆ, ಚೇತೇಶ್ವರ ಪೂಜಾರ ಬದಲು ಅಂಬಟಿ ರಾಯುಡು ಸೂಕ್ತ ಎನಿಸಿ ಅವರಿಗೆ ಸ್ಥಾನ ನೀಡಲಾಗಿದೆ. ಆದರೂ, ಶ್ರೀಲಂಕಾ ವಿರುದ್ಧದ ಮಹತ್ವದ ಪಂದ್ಯಕ್ಕಾಗಿ ನಾಯಕ ಕೊಹ್ಲಿ, ಅಂತಿಮ ಹನ್ನೊಂದರಲ್ಲಿ ಪೂಜಾರಗೆ ಸ್ಥಾನ ನೀಡುತ್ತಾರೋ ಅಥವಾ ಈಗಿನ ತಂಡವನ್ನೇ ಮುಂದುವರಿಸಿಕೊಂಡು ಹೋಗುತ್ತಾರೋ ನೋಡಬೇಕಾಗಿದೆ.
ಮತ್ತೊಂದೆಡೆ ಶ್ರೀಲಂಕಾ ಕೂಡ ಉತ್ತಮ ಫಾರ್ಮ್‌ನಲ್ಲಿದೆ. ಪಾಕಿಸ್ತಾನ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿ ರೋಚಕ ಗೆಲವು ದಾಖಲಿಸಿತ್ತು. ಪ್ರಮುಖವಾಗಿ ಅದ್ಭುತ ದಾಳಿ ನಡೆಸಿದ ಲಸಿತ್ ಮಾಲಿಂಗ 5 ವಿಕೆಟ್ ಪಡೆದು ಲಂಕಾ ಗೆಲವಿನಲ್ಲಿ ಮಿಂಚಿದ್ದರು.
ಇನ್ನು ಬ್ಯಾಟಿಂಗ್‌ನಲ್ಲಿ ಆರಂಭಿಕ ಲಹಿರು ತಿರಿಮಾನೆ ಶತಕ ಬಾರಿಸಿ ಗಮನ ಸೆಳೆದಿದ್ದರು. ಆಟದ ಎಲ್ಲ ವಿಭಾಗಗಳಲ್ಲೂ ಗುಣಮಟ್ಟದ ಪ್ರದರ್ಶನ ನೀಡಿದ್ದ ಲಂಕಾ ಪಡೆ, ಭಾರತದ ವಿರುದ್ಧವೂ ಗೆಲವು ದಾಖಲಿಸಿದರೆ ಅಚ್ಚರಿಪಡಬೇಕಾಗಿಲ್ಲ. ಹಾಗಾಗಿ, ಭಾರತದ ಯುವಶಕ್ತಿಯ ಮುಂದೆ ದೊಡ್ಡ ಸವಾಲು ಎದುರಾಗುವುದನ್ನು ಅಲ್ಲಗಳೆಯಲಾಗದು. ಬಾಂಗ್ಲಾದೇಶದ ವಾತಾವರಣಕ್ಕೆ ಲಂಕಾ ಆಟಗಾರರು ಉತ್ತಮವಾಗಿ ಒಗ್ಗಿಕೊಂಡಿದ್ದಾರೆ. ಏಕೆಂದರೆ, ಜನವರಿಯಲ್ಲಿಯೇ ಇಲ್ಲಿಗೆ ಪ್ರವಾಸ ಕೈಗೊಂಡಿದ್ದ ಅವರು ಆತಿಥೇಯರ ವಿರುದ್ಧ ಟೆಸ್ಟ್ ಸರಣಿಯಲ್ಲಿ 1-0 ಜಯ ಹಾಗೂ ಟಿ-20 (2-0) ಮತ್ತು ಏಕದಿನ (3-0) ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿಕೊಂಡಿದ್ದರು.
ಭಾರತ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ವರುಣ್ ಏರಾನ್, ಚೇತೇಶ್ವರ್ ಪೂಜಾರ, ಸ್ಟುವರ್ಟ್ ಬಿನ್ನಿ, ಅಮಿತ್ ಮಿಶ್ರಾ, ಈಶ್ವರ್ ಪಾಂಡೆ.
ಆ್ಯಂಜೆಲೊ ಮ್ಯಾಥ್ಯೂಸ್ (ನಾಯಕ), ಕುಶಾಲ್ ಪೆರೇರಾ, ಲಹಿರು ತಿರಿಮಾನೆ, ಕುಮಾರ ಸಂಗಕ್ಕಾರ, ಮಹೇಲ ಜಯವರ್ದನೆ, ತಿಸಾರ ಪೆರೇರಾ, ಚತುರಂಗ ಡಿಸಿಲ್ವಾ, ದಿನೇಶ್ ಚಂಡಿಮಲ್, ಸಚಿತ್ರ ಸೇನಾನಾಯಕೆ, ಲಸಿತ್ ಮಾಲಿಂಗ, ಸುರಂಗ್ ಲಕ್ಮಲ್, ಅಜಂತ ಮೆಂಡಿಸ್, ಆಶನ್ ಪ್ರಿಯಂಜನ್, ಧಮ್ಮಿಕಾ ಪ್ರಸಾದ್.


ಪಂದ್ಯ ಆರಂಭ: ಮಧ್ಯಾಹ್ನ 1.30 ಗಂಟೆ (ಭಾರತೀಯ ಕಾಲಮಾನ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement