ಫಿಕ್ಸಿಂಗ್: ಪೊಲೀಸ್ ಅಧಿಕಾರಿ ಅಮಾನತು
ಚೆನ್ನೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತಮ್ಮ ಸಹೊದ್ಯೋಗಿಯ ಮೇಲೆ ಆರೋಪ ಹೊರಿಸಿರುವ ಕಾರಣ, ತಮಿಳುನಾಡು ಸರ್ಕಾರ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ಅವರನ್ನು ಅಮಾನತು ಮಾಡಿದೆ.
ತಿರುಚಿಯ ರೈಲ್ವೆ ಸೂಪರಿಂಟೆಂಡೆಂಟ್ ಅಧಿಕಾರಿಯಾಗಿದ್ದ ಸಂಪತ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಅಮಾನತ್ತಿನ ಕ್ರಮಕ್ಕೆ ಅಧಿಕೃತ ಕಾರಣವನ್ನು ನೀಡಲು ನಿರಾಕರಿಸಿದ್ದಾರೆ. ತಮಿಳುನಾಡಿನ ಪೊಲೀಸ್ ಅಧಿಕಾರಿಗಳು ಮೇ 12ರಂದು ನಡೆದ ಸಿಎಸ್ಕೆ ಮತ್ತು ಆರ್ಆರ್ ನಡುವಣ ಐಪಿಎಲ್ ಪಂದ್ಯದ ಫಿಕ್ಸಿಂಗ್ ಪ್ರಕರಣದ ತನಿಖೆಯನ್ನು ನಡೆಸಲು ನಿರ್ಲಕ್ಷಿದರು ಎಂದು ಸಂಪತ್ ಕುಮಾರ್ ನ್ಯಾ. ಮುಕುಲ್ ಮುದ್ಗಲ್ ಸಮಿತಿಯ ಮುಂದೆ ಹೇಳಿಕೆ ನೀಡಿದ್ದರು.
ಇದೇವೇಳೆ ಫಿಕ್ಸಿಂಗ್ ಪ್ರಕರಣದ ತನಿಖಾ ತಂಡದ ಭಾಗವಾಗಿದ್ದ ಸಂಪತ್ ಕುಮಾರ್ ವಿರುದ್ಧ ಬಂಧಿತ ಬುಕ್ಕಿ ಸಹ ಕೆಲವು ಆರೋಪಗಳನ್ನು ಮಾಡಿದ್ದು, ಒಟ್ಟಾರೆಯಾಗಿ ಫಿಕ್ಸಿಂಗ್ ತನಿಖೆಯ ಪ್ರಕ್ರಿಯೆಯ ಮೇಲೆ ಅನುಮಾನ ಮೂಡುತ್ತಿದೆ.
ಅಲ್ಲದೆ ಸಿಬಿ ಸಿಐಡಿ ಮುಖ್ಯಸ್ಥ ನರೀಂದರ್ಪಾಲ್ ಸಿಂಗ್ ಡಿಜಿಪಿ ಕೆ. ರಾಮಾನುಜಮ್ ಅವರಿಗೆ ಸಂಪತ್ ಕುಮಾರ್ ಅವರನ್ನು ಅಮಾನತು ಮಾಡುವಂತೆ ಪ್ತರ ಬರೆದಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.