ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರೋಡಿಗಿಳಿದ ಲೇಡಿ

Lingaraj Badiger
Updated On : 28 Feb 2014, 4:34 am

ಫಾರ್ಮುಲಾ 1 ರೇಸ್ ಎಂದರೆ ಸಾಕು, ಅಲ್ಲಿ ಟೈಯರ್‌ಗಳು ಹರಿದಾಡುವ ವೇಗ ಕಣ್ಣಮುಂದೆ ಬಂದು ನಿಲ್ಲುತ್ತದೆ. ಪ್ರೇಕ್ಷಕನ ಮೈಕೂದಲಗಳು ನೆಟ್ಟಗಾಗುತ್ತವೆ. ಅಂಥ ರೋಚಕತೆ ಹೊಂದಿರುವ ಪುರುಷರ ದರ್ಬಾರ್‌ನ ರೇಸ್‌ನಲ್ಲಿ ಲೇಡಿ ಕಿಲಾಡಿಯೊಬ್ಬಳಿದ್ದರೆ, ಆ ರೇಸ್‌ಗೆ ಬರುವ ಮೆರುಗು ಹೇಗಿರಬಹುದು? ಹಿಂದೆ ಮಹಿಳೆಯರೂ ಎಫ್1 ರೇಸ್‌ನಲ್ಲಿ ಭಾಗವಹಿಸಿದ್ದಾರೆ. ಆದರೆ, ಯಾರೂ ಹೇಳಿಕೊಳ್ಳುವಂಥ ದಾಖಲೆ ಮಾಡಿಲ್ಲ. ಆದರೆ, ಹೊಸ ಇತಿಹಾಸ ಬರೆಯಲು ಸುಂದರಿಯೊಬ್ಬಳು ಸಿದ್ಧಳಾಗಿದ್ದಾಳೆ. ಕಳೆದೆರಡು ದಶಕಗಳಿಂದ ಯಾವುದೇ ಮಹಿಳೆ ಗ್ರಿಡ್‌ಗಿಳಿಯದೇ ಸೊರಗಿರುವ ರೇಸ್‌ಗೆ ಈಗ ಹೊಸ ಕಳೆಗಟ್ಟಲಿದೆ. ಅದು ಸ್ಕಾಟ್ಲೆಂಡ್ ಮೂಲದ ಸುಸೀ ವುಲ್ಫ್ ಮೂಲಕ. ಪ್ರಸಕ್ತ ಋತುವಿನ ಬ್ರಿಟಿಷ್ ಮತ್ತು ಜರ್ಮನಿ ಗ್ರ್ಯಾನ್ ಪ್ರಿ ಅಭ್ಯಾಸ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಮೈಲುಗಲ್ಲು ಸ್ಥಾಪಿಸಲಿದ್ದಾಳೆ.

ಯಾರೀಕೆ ವುಲ್ಫ್?
ಪ್ರತಿಯೊಬ್ಬ ಚಾಲಕರಂತೆ ಕಾರ್ಟಿಂಗ್ ಮೂಲಕ ಚಾಲನೆ ಆರಂಭಿಸಿದ ವುಲ್ಫ್, 1982ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ಜನಿಸಿದವರು. ಕಾರ್ಟಿಂಗ್‌ನಲ್ಲಿ ಪ್ರತಿಭೆ ಮೆರೆಯುವ ಮೂಲಕ 1996ರಲ್ಲಿ ವರ್ಷದ ಬ್ರಿಟಿಷ್ ಮಹಿಳಾ ಕಾರ್ಟಿಂಗ್ ಚಾಲಕ ಪ್ರಶಸ್ತಿ ಪಡೆದರು. 1997ರಲ್ಲಿ ಭಿನ್ನವಾದ ಕಾರ್ಟಿಂಗ್ ವಿಭಾಗಗಳನ್ನು ಪೂರ್ಣಗೊಳಿಸಿದರು. 1999ರಲ್ಲಿ ವುಲ್ಫ್ ಬ್ರಿಟಿಷ್ ಫಾರ್ಮುಲಾ 'ಎ' ಚಾಂಪಿಯನ್‌ಶಿಪ್ ಗೆದ್ದುಕೊಂಡರು. ಸತತವಾಗಿ ಚಾಲನೆಯಲ್ಲಿ ಸುಧಾರಣೆ ಕಂಡ ವುಲ್ಫ್, 2012ರಲ್ಲಿ ವಿಲಿಯಮ್ಸ್ ಫಾರ್ಮುಲಾ ಒನ್ ತಂಡದ ಅಭಿವೃದ್ಧಿ ಚಾಲಕಿಯಾದರು. ಮರ್ಸಿಡೀಸ್ ಬೆಂಜ್ ಮೋಟಾರ್ ಸ್ಪೋರ್ಟ್ಸ್ ನಿರ್ದೇಶಕ ಟೊಟೋ ವುಲ್ಫ್‌ರನ್ನು ಕೈಹಿಡಿದಿದ್ದೂ ಹೈಲೈಟ್. ಬ್ರಿಟಿಷ್ ಗ್ರಾನ್ ಪ್ರಿಯಲ್ಲಿ ಎಫ್‌ಡಬ್ಲ್ಯೂ 36 ನಂಬರ್‌ನ ಕಾರನ್ನು ಓಡಿಸಲು ಸುಸೀ ಕಾತರದಿಂದ ಎದುರು ನೋಡುತ್ತಿದ್ದಾರೆ.

'ಸುಸೀ ಈಗ ನಮ್ಮ ತಂಡದ ಪ್ರಮುಖ ಚಾಲಕರಲ್ಲಿ ಒಬ್ಬರಾಗಿದ್ದಾರೆ. 2014ರಲ್ಲಿ ಅವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇರಲಿದೆ. ಅವರ ವೃತ್ತಿಯಲ್ಲಿ ಮಹತ್ವದ ಹೆಜ್ಜೆ ಇಡಲು ನಾವು ಎದುರು ನೋಡುತ್ತಿದ್ದೇವೆ' ಎನ್ನುತ್ತಾರೆ ತಂಡದ ಮುಖ್ಯ ತಾಂತ್ರಿಕ ಅಧಿಕಾರಿ ಪ್ಯಾಟ್ ಸೈಮಂಡ್ಸ್.
ಪ್ರಮುಖ ಫಾರ್ಮುಲಾ ಒನ್ ತಂಡಗಳಲ್ಲಿ ಒಂದಾ ಸೌಬರ್ ಈ ವರ್ಷ ಸಿಮೋನಾ ಸಿಲ್ವೆಸ್ಟ್ರೋ ಅವರನ್ನು ಚಾಲಕಿಯಾಗಿ ನೇಮಕ ಮಾಡಿಕೊಳ್ಳುವ ಬಗ್ಗೆ ಘೋಷಿಸಿತ್ತು. ಅಲ್ಲದೆ 2015ರ ಗ್ರ್ಯಾನ್ ಪ್ರಿ ನಂತರ ಸ್ಪರ್ಧೆಗಳಿಸುವುದಾಗಿ ಅದು ಹೇಳಿದೆ.

1976ರಲ್ಲಿ ಚಾಲನೆ ಮಾಡಿದ ಲೆಲ್ಲಾ ಲಾಂಬಾರ್ಡಿ ಅವರೇ ಕೊನೆ ಮಹಿಳಾ ಚಾಲಕಿ. ಅಲ್ಲದೆ ಟಾಪ್ 6 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಏಕೈಕ ಮಹಿಳಾ ಚಾಲಕಿ ಎಂಬ ದಾಖಲೆಯನ್ನೂ ಅವರು ಬರೆದಿದ್ದಾರೆ. ಮಾರಿಯಾ ಡಿ ವಿಲ್ಲೋಟಾ 2012ರಲ್ಲಿ ಮಾರುಷ್ಯಾ ಪ್ರಿಯಾರ್ ತಂಡದ ಪರೀಕ್ಷಾರ್ಥ ಚಾಲನೆ ಮಾಡುತ್ತಿದ್ದಾಗೆ ಗಂಭೀರವಾಗಿ ಗಾಯಗೊಂಡಿದ್ದರು.

ಸುಸೀ ಮಾತು...
'ಬ್ರಿಟಿಷ್ ಎಫ್ 1 ತಂಡದಲ್ಲಿ ನಾನು ನನ್ನ ಸಾಮರ್ಥ್ಯ ಸಾಬೀತುಪಡಿಸಿದಾಗಿನಿಂದ, ನನ್ನ ಜವಾಬ್ದಾರಿ ನಿಧಾನವಾಗಿ ಹೆಚ್ಚಾಗಿದೆ. ಕಳೆದ ಋತುವಿನಲ್ಲಿ ಸಿಲ್ವರ್‌ಸ್ಟೋನ್ ಟ್ರ್ಯಾಕ್‌ನಲ್ಲಿ ಪರೀಕ್ಷಾರ್ಥ ಚಾಲನೆಯ ವೇಳೆಯೇ ಎಫ್1ನಲ್ಲಿರುವ ನನ್ನ ಉತ್ಸಾಹವನ್ನು ಪ್ರಕಟಿಸಿದ್ದೇನೆ'

-ರೋಹನ್ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement