ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಛಲವೇ ಬಲ

ಈಕೆ ಚಿಕ್ಕ ವಯಸ್ಸಿನಿಂದಲೂ ಕಷ್ಟಕ್ಕೆ ಅಂಜದ ಗಟ್ಟಿಗಿತ್ತಿ. ಸಾಧಾರಣ ಕುಟುಂಬದಲ್ಲಿ ಹುಟ್ಟಿ ಮಧ್ಯಮ ವರ್ಗದಲ್ಲಿ ಬೆಳೆದಿದ್ದಾಳೆ...

Rashmi Kasaragodu
Updated On : 17 Jan 2014, 4:00 am

ಈಕೆ ಚಿಕ್ಕ ವಯಸ್ಸಿನಿಂದಲೂ ಕಷ್ಟಕ್ಕೆ ಅಂಜದ ಗಟ್ಟಿಗಿತ್ತಿ. ಸಾಧಾರಣ ಕುಟುಂಬದಲ್ಲಿ ಹುಟ್ಟಿ ಮಧ್ಯಮ ವರ್ಗದಲ್ಲಿ ಬೆಳೆದಿದ್ದಾಳೆ. ಆದರೆ, ಸಾಧನೆಯ ಗುರಿ ಮಾತ್ರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ್ದು. ಸಂಕೋಚದ ಮುದ್ದೆಯಾದ ಈ ಬಾಲಕಿಯ ಪ್ರತಿಭೆ ಬಲ್ಲವರಿಗಷ್ಟೇ ಗೊತ್ತು. ಸಾಧನೆಯ ಅಹಂ ತಲೆಗೇರದೆ ಸಾಮಾನ್ಯ ಬಾಲಕಿಯಂತೆ ವರ್ತಿಸುವ ಇವಳು ಏಕಾಂತ ಪ್ರಿಯೆ. ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾಗಿರುವ ದಾವಣಗೆರೆಯ ಶ್ರೀ ಸಿದ್ಧಗಂಗಾ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ರೇವತಿ ನಾಯಕ್ ಎಂಬ ಬಾಲೆಯೇ ಆ ಪ್ರತಿಭೆ. ದಾವನ ಸ್ವಿಮ್ಮಿಂಗ್ ಸೆಂಟರಿನಲ್ಲಿ ನಿರಂತರ ಈಜು ತರಬೇತಿ ಪಡೆದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾಳೆ.
ದೈಹಿಕ ನ್ಯೂನತೆಯನ್ನು ಮೆಟ್ಟಿನಿಂತ ರೇವತಿ ಇತರ ಸಮವಯಸ್ಕ ಬಾಲಕಿಯರಿಗೆ ಮಾದರಿ. ಮೊಣಕಾಲಿನಲ್ಲಿ ಗಂಟು, ಜೊತೆಗೆ ಎಡಗಾಲು ಕೊಂಚ ಗಿಡ್ಡ. ಆದರೆ ಛಲಕ್ಕೇನೂ ಕೊರತೆ ಇಲ್ಲ. ಬಟರ್ ಫ್ಲೈ, ಬ್ಯಾಕ್ ಸ್ಟ್ರೋಕ್, ಫ್ರಿ ಸ್ಟೈನಲ್ಲಿ ರೇವತಿ ಪಡೆದ ಪ್ರಶಸ್ತಿ ಪತ್ರಗಳಿಗೆ ಲೆಕ್ಕವಿಲ್ಲ. ಈ ಬಾಲೆ ರಾಷ್ಟ್ರಮಟ್ಟದ ಪ್ಯಾರಾಸ್ವಿಮ್‌ನಲ್ಲಿ ಪ್ರಥಮ ಸ್ಥಾನಗಳಿಸಿ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದ ನ್ಯೂಕ್ಯಾಸಲ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.
ವಂಶಪಾರಂಪರ್ಯವಾದ ಮೊಣಕಾಲಿನ ನ್ಯೂನತೆಯಿಂದ ತನ್ನ ಮಕ್ಕಳು ಹೊರಬರಬೇಕು. ಅಸಾಧ್ಯವಾದುದನ್ನು ಸಾಧಿಸಬೇಕು. ತನ್ನ ಮಕ್ಕಳು ಅಥ್ಲೀಟ್‌ಗಳಾಗಬೇಕು ಎಂದು ಸ್ವತಃ ಕ್ರೀಡಾಪಟುವಾದ ತಂದೆ ಮಂಜುನಾಥ್ ಕನಸು ಕಂಡರು. ಆದರೆ ಅದೃಷ್ಟ ದೇವತೆ ಈ ಮಕ್ಕಳಿಗೆ ಹೆಬ್ಬಾಗಿಲು ತೆರೆದಿಟ್ಟಳು. ಕಾಲುವೆಯಲ್ಲಿ ಈಜು ಕಲಿಸಲು ಹೋದ ಮಂಜುನಾಥ್ ಬರಿದಾದ ಕಾಲುವೆ ನೋಡಿ ನಡೆದಿದ್ದು, ನೇರವಾಗಿ ದಾವನ ಸ್ವಿಮ್ಮಿಂಗ್ ಪೂಲ್‌ಗೆ. ಇತರ ಮಕ್ಕಳು ಈಜುವುದನ್ನು ನೋಡಿ ಹೊಸ ಕನಸೊಂದನ್ನು ಹೆಣೆದರು. ಅವರ ಮಕ್ಕಳಾದ ರೇವತಿ- ರಕ್ಷಿತ ಸದಸ್ಯರಾದರು. ಇಬ್ಬರೂ ಈಜನ್ನು ತಮ್ಮ ಉಸಿರಾಗಿಸಿಕೊಂಡಿದ್ದಾರೆ. 2ನೇ ತರಗತಿ ಪುಟಾಣಿ ಬಾಲಕ ನಕ್ಷತ್ರನಿಗೆ ಅಕ್ಕ ರೇವತಿ ರೋಲ್ ಮಾಡೆಲ್.
ಪ್ಯಾರಾಲಿಂಪಿಕ್‌ಗೆ ದಾವಣಗೆರೆಯಿಂದ ಪ್ರಥಮವಾಗಿ ಸ್ಪರ್ಧಿಸುತ್ತಿರುವ ಸಿದ್ಧಗಂಗೆಯ ಹೆಮ್ಮೆಯ ಬಾಲಕಿ ರೇವತಿಗೆ ಅಭಿನಂದನೆ ಸಲ್ಲಿಸೋಣ. ಪ್ಯಾರಾ ಸ್ವಿಮ್‌ನಲ್ಲಿ ಭಾಗವಹಿಸುತ್ತಿರುವ ಈ ಬಾಲಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂದು ಹಾರೈಸೋಣ.

-ಉಷಾ ಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement