ಹೊಸ ಬೆಳಕು
ಹದಿನೈದು ವರ್ಷ ಹಿಂದೆ ಭಾರತೀಯ ಕ್ರಿಕೆಟ್ ತಂಡದಲ್ಲಿ ವಿಜೃಂಭಿಸುತ್ತಿದ್ದ ಕರ್ನಾಟಕದ ಆಟಗಾರರು ಇಡೀ ರಾಜ್ಯವೇ ಹೆಮ್ಮಪಡುವಂತೆ ಮಾಡಿದ್ದರು...
ಹದಿನೈದು ವರ್ಷ ಹಿಂದೆ ಭಾರತೀಯ ಕ್ರಿಕೆಟ್ ತಂಡದಲ್ಲಿ ವಿಜೃಂಭಿಸುತ್ತಿದ್ದ ಕರ್ನಾಟಕದ ಆಟಗಾರರು ಇಡೀ ರಾಜ್ಯವೇ ಹೆಮ್ಮಪಡುವಂತೆ ಮಾಡಿದ್ದರು. ಆದರೆ 2000ದಿಂದ ಈಚೆಗೆ ಕರ್ನಾಟಕದ ಬೆರಳೆಣಿಕೆ ಆಟಗಾರರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದು ಕರ್ನಾಟಕ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ಸಂಗತಿ.
ದಿಗ್ಗಜರಾದ ದ್ರಾವಿಡ್, ಕುಂಬ್ಳೆ, ಶ್ರೀನಾಥ್ ಹೊರತು ಪಡಿಸಿದರೆ, ಕಳೆದೊಂದು ದಶಕದಲ್ಲಿ ಭಾರತ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾದ ಆಟಗಾರರು ರಾಬಿನ್ ಉತ್ತಪ್ಪ, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಈಗ ಸ್ಟುವರ್ಟ್ ಬಿನ್ನಿ ಅಷ್ಟೇ.
ನ್ಯೂಜಿಲೆಂಡ್ ಪ್ರವಾಸಕ್ಕೆ ಸ್ಟುವರ್ಟ್ ಬಿನ್ನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಸುದ್ದಿ ಕೇಳಿದಾಗ ರಾಜ್ಯದ ಕ್ರಿಕೆಟ್ ಪ್ರೇಮಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಕೇವಲ ಒಬ್ಬ ಆಟಗಾರ ಭಾರತ ತಂಡಕ್ಕೆ ಆಯ್ಕೆಯಾದಾಗ ಇಷ್ಟು ಸಂಭ್ರಮ ಪಡಬೇಕಾದ ಪರಿಸ್ಥಿತಿ ಬಂದೊದಗಿರುವುದು ದುರದೃಷ್ಟಕರ.
ಕರ್ನಾಟಕ ತಂಡ ತಮ್ಮ ಹಳೆಯ ದಿನಗಳಲ್ಲಿ ಹುಲಿಯಂತಹ ಆಟಗಾರರನ್ನು ಹೊಂದಿತ್ತು. ಆಗ ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಕಂಡರೆ ಉಳಿದ ತಂಡಗಳಲ್ಲಿ ಗೊತ್ತಿಲ್ಲದ ರೀತಿಯಲ್ಲಿ ನಡುಕ ಹುಟ್ಟುತ್ತಿತ್ತು. ಒಂದೂವರೆ ದಶಕದಿಂದ ಈಚೆಗೆ ಕರ್ನಾಟಕ ರಣಜಿ ಪಂದ್ಯಾವಳಿಯ ಪ್ರಶಸ್ತಿಯ ಹಸಿವಿನಿಂದ ಕಂಗೆಟ್ಟಿದೆ. ಈ ಅವಧಿಯಲ್ಲಿ ರಾಜ್ಯ ತಂಡ 2009-10ನೇ ಸಾಲಿನಲ್ಲಿ ಒಂದು ಬಾರಿ ಫೈನಲ್ಗೆ ಪ್ರವೇಶಿಸಿತ್ತಾದರೂ ಗೆಲವಿನ ಹೊಸ್ತಿಲಲ್ಲಿ ಮುಗ್ಗರಿಸಿತ್ತು.
ಮೂಡಿದ ಆಶಾಕಿರಣ
ಕರ್ನಾಟಕ ತಂಡ ಪ್ರಸಕ್ತ ಸಾಲಿನಲ್ಲಿ ತೋರುತ್ತಿರುವ ಪ್ರದರ್ಶನ ಅಮೋಘ. ಈ ತಂಡದಲ್ಲಿ ಯುವ ಆಟಗಾರರು ಹೆಚ್ಚಾಗಿದ್ದರೂ ಹಿರಿಯರನ್ನು ಒಳಗೊಂಡ ಪರಿಪಕ್ವ ತಂಡವಾಗಿದೆ. ಈ ತಂಡದ ಪ್ರದರ್ಶನ ಕರ್ನಾಟಕದ ಹಳೆಯ ದಿನಗಳ ಪ್ರದರ್ಶನವನ್ನು ನೆನಪಿಸುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಲೀಗ್ ಪಂದ್ಯಗಳೂ ಸೇರಿದಂತೆ ಒಟ್ಟು 9 ಪಂದ್ಯಗಳನ್ನಾಡಿದೆ. ಅದರಲ್ಲಿ ಮೊದಲ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಎರಡರಲ್ಲಿ ಇನಿಂಗ್ಸ್ ಮುನ್ನಡೆ ಪಡೆದರೆ, ಒಂದರಲ್ಲಿ ಮಾತ್ರ ಹಿನ್ನಡೆ ಅನುಭವಿಸಿತ್ತು. ನಂತರ ನಡೆದ ಕ್ವಾರ್ಟರ್ಫೈನಲ್ ಪಂದ್ಯದವರೆಗೂ ಕರ್ನಾಟಕ ಸತತ ಆರು ಪಂದ್ಯಗಳನ್ನು ಗೆದ್ದುಕೊಂಡಿದೆ.
ತಂಡ ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲೂ ಸಂಘಟಿತ ದಾಳಿ ನಡೆಸುತ್ತಿದೆ. ಇದರಿಂದಾಗಿಯೇ ಎದುರಾಳಿಗೆ ತೊಡೆ ತಟ್ಟಿ ಸವಾಲು ನೀಡಲು ಸಾಧ್ಯವಾಗಿದೆ.
ಗಮನ ಸೆಳೆದ ಹುಡುಗರು
ತಂಡದ ಈ ಯಶಸ್ಸಿಗೆ ಪ್ರಮುಖ ಕಾರಣ ಎಂದರೆ, ಯುವ ಆಟಗಾರರು ಪ್ರಸಕ್ತ ಸಾಲಿನಲ್ಲಿ ಪದಾರ್ಪಣೆ ಮಾಡಿರುವ ಶ್ರೇಯಸ್ ಗೋಪಾಲ್ ಹಾಗೂ ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಇನ್ನು ಕೆ.ಎಲ್. ರಾಹುಲ್(869 ರನ್), ಎಚ್.ಎಸ್. ಶರತ್(32 ವಿಕೆಟ್) ಹೆಚ್ಚಿನ ಅನುಭವವನ್ನು ಹೊಂದಿಲ್ಲದಿದ್ದರೂ, ಈ ವರ್ಷದಿಂದ ತಂಡದ ಕಾಯಂ ಸದಸ್ಯರಾಗಿದ್ದಾರೆ. ಈ ಐವರು ತಂಡಕ್ಕೆ ಅಮೂಲ್ಯ ಪ್ರದರ್ಶನ ನೀಡುತ್ತಿದ್ದು, ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಈ ಯುವ ಆಟಗಾರರಿಗೆ ಯಶಸ್ಸಿನ ಹಸಿವು ಹೆಚ್ಚಾಗಿರುವುದಕ್ಕೆ ಅವರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ರೀತಿ ಹಾಗೂ ಮೈದಾನದಲ್ಲಿ ತೋರುತ್ತಿರುವ ಪ್ರದರ್ಶನವೇ ಸಾಕ್ಷಿ.
ಈ ಯುವಕರನ್ನು ಸರಿಯಾಗಿ ಬಳಸಿಕೊಂಡು ಮಾರ್ಗದರ್ಶನ ನೀಡಲು, ತಂಡದಲ್ಲಿ ಸ್ಟುವರ್ಟ್ ಬಿನ್ನಿ, ವಿನಯ್ ಕುಮಾರ್, ಸಿ.ಎಂ. ಗೌತಮ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಅಮಿತ್ ವರ್ಮಾರಂತಹ ಪ್ರತಿಭಾನ್ವಿತ ಹಿರಿಯ ಆಟಗಾರರಿದ್ದಾರೆ. ಹಾಗಾಗಿ ಕರ್ನಾಟಕ ಕಳೆದೆರಡು ವರ್ಷಗಳ ಪ್ರದರ್ಶನಕ್ಕಿಂತ ಅಮೋಘ ರೀತಿಯಲ್ಲಿ ಗೆಲವಿನ ಓಟ ನಡೆಸುತ್ತಿದೆ.
ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿ, ಎಚ್.ಎಸ್. ಶರತ್ ವೇಗ, ಬೌಲಿಂಗ್ ವಿಭಾಗಕ್ಕೆ ಬಲ ನೀಡಿದರೆ, ಕೆ.ಎಲ್. ರಾಹುಲ್ ಸದೃಢ ಬ್ಯಾಟಿಂಗ್ ತಂಡವನ್ನು ಸಂಕಷ್ಟದಿಂದ ಪಾರುಮಾಡುವ ಸಾಮರ್ಥ್ಯ ಹೊಂದಿದೆ. ಇನ್ನು ಮಯಾಂಕ್ ಅಬ್ಬರದ ಬ್ಯಾಟಿಂಗ್ ಹಾಗೂ ಕರುಣ್ ನಾಯರ್ ಸಮಯೋಚಿತ ಬ್ಯಾಟಿಂಗ್ ಕೌಶಲ್ಯ ಕೂಡ ತಂಡಕ್ಕೆ ಬಲ ತುಂಬಿದೆ. ಈ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದೇ ಆದರೆ, ಕರ್ನಾಟಕ ಆಟಗಾರರು ಮತ್ತೆ ಭಾರತ ತಂಡದಲ್ಲಿ ಸಿಂಹಪಾಲು ಪಡೆಯುವುದರಲ್ಲಿ ಅನುಮಾನವಿಲ್ಲ.
ಇನ್ನು ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕ ಸೆಮಿಫೈನಲ್ ಹಾಗೂ ಫೈನಲ್ ಹಂತದಲ್ಲಿ ಆಡಬೇಕಿದ್ದು, ತಂಡ ಪ್ರಶಸ್ತಿ ಗೆದ್ದುಕೊಳ್ಳಲಿ ಎನ್ನುವುದು ರಾಜ್ಯದ ಕ್ರಿಕೆಟ್ ಪ್ರೇಮಿಗಳ ಹಾರೈಕೆ.
- ಸೋಮಶೇಖರ ಪಿ. ಭದ್ರಾವತಿ