ಕೆನಡಾ ಓಪನ್: 3ನೇ ಸುತ್ತಿಗೆ ಆನಂದ್
ವ್ಯಾಂಕೊವರ್: ಉತ್ತಮ ಪ್ರದರ್ಶನ ಮುಂದುವರಿಸಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ ಆನಂದ್ ಪವಾರ್, ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಆನಂದ್ ಪವಾರ್, ಸ್ಥಳೀಯ ಆಟಗಾರ ಬಾಬಿ ಮಿಲ್‌ರೊಯ್ ವಿರುದ್ಧ 21-12, 21-11ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಆರಂಭದಲ್ಲೇ ನಿಯಂತ್ರಣ ಪಡೆದ ಆನಂದ್, ಪಂದ್ಯದುದ್ದಕ್ಕೂ ಎರದುರಾಳಿಯ ವಿರುದ್ಧ ಬಿಗಿ ಹಿಡಿತ ಸಾಧಿಸಿದರು. ಮೊದಲ ಸೆಟ್‌ನಲ್ಲಿ 21-12ರ ಅಂತರದಲ್ಲಿ ಮೇಲುಗೈ ಸಾಧಿಸಿದ ಆನಂದ್, ಎರಡನೇ ಸುತ್ತಿನಲ್ಲೂ ಅದೇ ಪ್ರದರ್ಶನ ಮುಂದುವರಿಸುವ ಮೂಲಕ 21-11 ಅಂತರದ ಮುನ್ನಡೆ ಪಡೆದು ಗೆಲವಿನ ನಗೆ ಬೀರಿದರು.
ಆನಂದ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಕೋರಿಯಾದ ಕಿಮ್ ಡಾಂಗ್ ಹೂನ್ ವಿರುದ್ಧ 21-17, 21-9 ಅಂತರದಲ್ಲಿ ಗೆಲವು ದಾಖಲಿಸಿದ್ದರು.
ಆನಂದ್ ತಮ್ಮ ಮುಂದಿನ ಪಂದ್ಯದಲ್ಲಿ ಚೈನೀಸ್ ತೈಪೇ ಆಟಗಾರ ಕ್ಯೂ ಚುನ್ ಶಿ ವಿರುದ್ಧ ಕಾದಾಟ ನಡೆಸಲಿದ್ದು, ಅಂತಿಮ ಎಂಟರ ಘಟ್ಟದಲ್ಲಿ ಸ್ಥಾನ ಪಡೆಯಲು ಹೋರಾಟ ನಡೆಸಲಿದ್ದಾರೆ.