ಲುಸಿ ಲೀ
ಗಾಲ್ಫ್ ಲೋಕದಲ್ಲಿ ಮಿನುಗುತ್ತಿರುವ ಮಹಾನ್ ನಕ್ಷತ್ರ ಅಮೆರಿಕದ ಟೈಗರ್ ವುಡ್ಸ್. ಆತನನ್ನು ಮೀರಿಸುವ ಹಾದಿಯಲ್ಲಿ ಸಾಗುತ್ತಿದ್ದಾಳೆ 11ರ ಹರಯದ ಬಾಲೆ.
ಚಾಕೋಲೆಟ್ ತಿನ್ನುತ್ತಾ ಶಾಲೆಯ ಆಟ- ಪಾಠಗಳಲ್ಲಿ ಕಳೆದುಹೋಗಬೇಕಿದ್ದ ಲುಸಿ ಲೀ ಈಗ ಜಗತ್ತಿನ ಅಚ್ಚರಿಯ ಕೇಂದ್ರಬಿಂದು. ಕಷ್ಟಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದು ಸುಳ್ಳಲ್ಲ. ತನ್ನ ಶ್ರಮಕ್ಕೆ ಬೆಲೆ ಸಿಕ್ಕಿದ್ದು ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಪೈನ್ಹರ್ಸ್ಟ್ ಮಹಿಳೆಯರ ಮುಕ್ತ ಗಾಲ್ಫ್ನಲ್ಲಿ. ಟೂರ್ನಿಯಲ್ಲಿ ಈಕೆಗೆ ಸಿಕ್ಕಿದ್ದು 8ನೇ ಸ್ಥಾನ. 1 ಮತ್ತು 5ನೇ ಸುತ್ತಿನಲ್ಲಿ ನೀಡಿದ ಪ್ರದರ್ಶನ ನಿಜಕ್ಕೂ ಅದ್ಭುತ. ಈಕೆಯ ಪ್ರದರ್ಶನ ಜಗತ್ತಿನ ಅತಿರಥ- ಮಹಾರಥರನ್ನೂ ಅಚ್ಚರಿಯ ಕೂಪಕ್ಕೆ ತಳ್ಳಿದೆ. ಅಷ್ಟೇ ಅಲ್ಲ, ಈ ಸಾಧನೆ ಮೂಲಕ ಯುಎಸ್ ಓಪನ್ ಗಾಲ್ಫ್ ಟೂರ್ನಿಗೆ ಅರ್ಹತೆ ಪಡೆದಳು. 11 ವರ್ಷದ ಬಾಲಕಿ ಕಿರಿಯ ವಯಸ್ಸಿನಲ್ಲಿ ಇಂಥದ್ದೊಂದು ಗೌರವಕ್ಕೆ ಪಾತ್ರರಾಗಿರುವುದು ಇದೇ ಮೊದಲು.