ವಿಂಡೀಸ್ಗೆ ಜಯ ಸರಣಿ ಸಮಬಲ
ಡಾಮಿನಿಕಾ: ಸಾಂಘಿಕ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ಆಟಗಾರರು ಎರಡನೇ ಹಾಗೂ ಅಂತಿಮ ಟಿ-20 ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 39 ರನ್ಗಳಿಂದ ಜಯ ದಾಖಲಿಸಿದ್ದಾರೆ. ಆ ಮೂಲಕ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಎರಡು ಪಂದ್ಯಗಳ ಸರಣಿಯಲ್ಲಿ ಎದುರಾಳಿ ಜೊತೆ 1-1 ಸಮಗೌರವ ಸಾಧಿಸಿದೆ. ವಿಂಡ್ಸರ್ ಪಾರ್ಕ್ನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರುಗಳಲ್ಲಿ 6 ವಿಕೆಟ್ಗೆ 165 ರನ್ಗಳ ಉತ್ತಮ ಮೊತ್ತ ಸಂಪಾದಿಸಿತು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ವಿಂಡೀಸ್ನ ಆ್ಯಂಡ್ರೆ ಫ್ಲೆಚರ್ (62ರನ್, 49 ಎಸೆತ, 3 ಬೌಂಡರಿ, 3 ಸಿಕ್ಸರ್) ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಅವರು 2 ವಿಕೆಟ್ ಪಡೆದರು. ಉತ್ತರವಾಗಿ ಸ್ಪರ್ಧಾತ್ಮಕ ಗುರಿ ಬೆಂಬತ್ತಿದ ನ್ಯೂಜಿಲೆಂಡ್ 19.1 ಓವರುಗಳಲ್ಲಿ 126 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರ ಕೇನ್ ವಿಲಿಯಮ್ಸನ್ 28 ಎಸೆತಗಳಲ್ಲಿ 5 ಬೌಂಡರಿಗಳಿದ್ದ 37 ರನ್ಗಳಿಸಿದ್ದೇ ವೈಯಕ್ತಿಕ ಗರಿಷ್ಠ ಮೊತ್ತವಾಯಿತು. ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ತಂಡ ಡಕ್ವರ್ತ್ ಲೂಯಿಸ್ ನಿಮಯದಡಿ 12 ರನ್ಗಳಿಂದ ಗೆದ್ದುಕೊಂಡಿತ್ತು.
ವೆಸ್ಟ್ ಇಂಡೀಸ್ನ ಆ್ಯಂಡ್ರೆ ಫ್ಲೆಚರ್ ಪಂದ್ಯ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳೆರಡಕ್ಕೂ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 20 ಓವರುಗಳಲ್ಲಿ 6 ವಿಕೆಟ್ಗೆ 165 (ಆ್ಯಂಡ್ರೆ ಫ್ಲೆಚರ್ 62, ಲೆಂಡ್ಲ್ ಸಿಮನ್ಸ್ 36,
ಟ್ರೆಂಟ್ ಬೌಲ್ಟ್ 22ಕ್ಕೆ2).
ನ್ಯೂಜಿಲೆಂಡ್ 19.1 ಓವರುಗಳಲ್ಲಿ 126 (ಕೇನ್ ವಿಲಿಯಮ್ಸನ್ 37, ಬ್ರೆಂಡನ್ ಮೆಕಲಂ 21, ರಾಸ್ ಟೇಲರ್ 21, ಶೆಲ್ಡನ್ ಕಾಟ್ರೆಲ್ 28ಕ್ಕೆ3, ಸುನೀಲ್ ನಾರಾಯಣ್ 19ಕ್ಕೆ2).