ಸಿಟಿಎಲ್ ಘೋಷಿಸಿದ ಅಮೃತ್ರಾಜ್
ನವದೆಹಲಿ: ಚಾಂಪಿಯನ್ಸ್ ಟೆನಿಸ್ ಲೀಗ್ (ಸಿಟಿಎಲ್) ಆರಂಭಿಸುವುದಾಗಿ ಭಾರತದ ಟೆನಿಸ್ ದಂತಕತೆ ವಿಜಯ್ ಅಮೃತ್ರಾಜ್ ಅವರು ಸೋಮವಾರ ಘೋಷಿಸಿದ್ದಾರೆ. ದೇಶದಲ್ಲಿ ಟೆನಿಸ್ ಕ್ರೀಡೆಯನ್ನು ಉನ್ನ್ನತಮಟ್ಟಕ್ಕೇರಿಸಲು, ಅಲ್ಲದೆ, ಟೆನಿಸ್ ಬಗ್ಗೆ ಜಾಗೃತಿ ಹಾಗೂ ಜನಪ್ರೀಯತೆ ಹೆಚ್ಚಿಸಲು ಪ್ರಯತ್ನ ಮಾಡುತ್ತಿರುವುದಾಗಿ ಅಮೃತ್ರಾಜ್ ತಿಳಿಸಿದ್ದಾರೆ.
ಆರು ನಗರಗಳ ಮೂಲದ ತಂಡಗಳನ್ನು ಸಿಟಿಎಲ್ ಹೊಂದಿರಲಿದ್ದು, ನವೆಂಬರ್ 17ರಿಂದ 26ರವರೆಗೆ 10 ದಿನಗಳ ಅವಧಿಯಲ್ಲಿ 13 ಪಂದ್ಯಗಳನ್ನು ಆಡಲಾಗುತ್ತದೆ. ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ತಂಡಗಳು ತವರಿನಲ್ಲಿ ಮತ್ತು ತವರಿನಿಂದ ಹೊರಗಿನ ಸ್ಥಳಗಳಲ್ಲಿ ಪಂದ್ಯಗಳನ್ನು ಆಡಲಿವೆ. ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಫೈನಲ್ನಲ್ಲಿ ಸೆಣಸಲಿವೆ. ಫೈನಲ್ನಲ್ಲಿ ಗೆದ್ದ ತಂಡ ರು. 1 ಕೋಟಿ ಬಹುಮಾನ ಪಡೆಯಲಿದೆ. ರನ್ನರ್ ಅಪ್ ತಂಡ ರು. 50 ಲಕ್ಷ ಹಣ ಪಡೆಯಲಿದೆ ಎಂದು ಅಮೃತ್ರಾಜ್ ತಿಳಿಸಿದ್ದಾರೆ.
ಸಿಟಿಎಲ್ ತಂಡಗಳಲ್ಲಿ ಮಹಿಳೆಯರು ಮತ್ತು ಪುರುಷರು ಇರಲಿದ್ದು, ಅಂತಾರಾಷ್ಟ್ರೀಯ ರ್ಯಾಂಕಿಂಗ್ನಲ್ಲಿ 5ರಿಂದ 25ರವರೆಗೆ ಸ್ಥಾನ ಹೊಂದಿರುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆರು ತಂಡಗಳು ಅಂತಾರಾಷ್ಟ್ರೀಯ ದಂತಕತೆಯನ್ನು ತಮ್ಮ ಆಡುವ ನಾಯಕನನ್ನಾಗಿ ಹೊಂದಲಿವೆ. ಈ ತಂಡಗಳು ತಮ್ಮ ನಗರವನ್ನು ಬಿಟ್ಟು ಇತರ ನಗರಗಳಿಗೂ ತೆರಳಲಿವೆ. ಇತರ ನಗರಗಳಲ್ಲಿ ಆಟದೊಂದಿಗೆ ಟೆನಿಸ್ಗೆ ಉತ್ತೇಜನ ಮತ್ತು ಮನೋರಂಜನೆ ನೀಡುವುದು ಇದರ ಉದ್ದೇಶವಾಗಿದೆ.